ಬೆಂಗಳೂರು: ತಮಿಳುನಾಡು ಮುಜರಾಯಿ ಇಲಾಖೆ ಸಚಿವರ ಮಗಳು ಪ್ರಿಯಕರನೊಂದಿಗೆ ನಾಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸಚಿವರ ಮಗಳು ಪ್ರಿಯಕರನನ್ನು ಮದುವೆಯಾಗಿದ್ದು ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಬೇಕು ಎಂದು ಇದೀಗ ಕರ್ನಾಟಕ ಪೊಲೀಸರ ಮೊರೆ ಹೋಗಿದ್ದಾರೆ.
ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್ ಬಾಬು ಮಗಳು ಜಯಕಲ್ಯಾಣಿ ಹಾಗು ಪ್ರಿಯಕರ ಸತೀಶ್ ಕುಮಾರ್ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆ ಜಯಕಲ್ಯಾಣಿ ತಮಿಳುನಾಡಿನಿಂದ ಎಸ್ಕೇಪ್ ಆಗಿದ್ದರು. ನಾಪತ್ತೆಯಾದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಜಯಕಲ್ಯಾಣಿ ಕಿಡ್ನ್ಯಾಪ್ ಆಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಜೋಡಿ ಮದುವೆಯಾಗಿದ್ದು, ನನಗೂ ಮತ್ತು ಪ್ರಿಯಕರನಿಗೂ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ ಎಂದು ಜಯಕಲ್ಯಾಣಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಯಕಲ್ಯಾಣಿ, ಹಲವು ವರ್ಷಗಳಿಂದ ಸತೀಶ್ ಅವರನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಪ್ರೀತಿಗೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳು ಕಾಲ ಪ್ರಿಯಕರ ಸತೀಶ್ ಕುಮಾರ್ ನನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಅವರ ಕುಟುಂಬದ ಸದಸ್ಯರಿಗೂ ತೊಂದರೆ ನೀಡಲಾಗಿದೆ. ನಾನು ಮೇಜರ್ ಆಗಿದ್ದು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ತಮಿಳುನಾಡಿಗೆ ಹೋದರೆ ನಮ್ಮನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ತಂದೆ ತಮಿಳು ನಾಡು ಸರ್ಕಾರದಲ್ಲಿ ಪ್ರಭಾವಿ ಮಂತ್ರಿ ಆಗಿರುವ ಹಿನ್ನಲೆ ನಾವು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದೇವೆ. ನಮಗೆ ರಕ್ಷಣೆ ನೀಡಬೇಕೆಂದು ಕರ್ನಾಟಕ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.










