ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ – ಈಶ್ವರಪ್ಪ ಸಂಪುಟದಿಂದ ವಜಾಗೊಳಿಸುವಂತೆ ಮನವಿ…

75
firstsuddi

ಬೆಂಗಳೂರು : ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಸಚಿವ ಈಶ್ವರಪ್ಪನವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಪತ್ರದಲ್ಲೇನಿದೆ?
ನಾವು ತಮ್ಮಲ್ಲಿ ಗೌರವ ಪೂರ್ವಕವಾಗಿ ಮನವಿ ಮಾಡುವುದೇನೆಂದರೆ, ಬೆಳಗಾವಿ ಜಿಲ್ಲೆಯ ಸಂತೋಷ್ ಕೆ. ಪಾಟೀಲ್ ಅವರು ಓರ್ವ ಗುತ್ತಿಗೆದಾರ ಮತ್ತು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಇವರು ಏ.12 ರಂದು ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆತ್ಮಹತ್ಯೆ ಸಂದೇಶ ರವಾನಿಸಿ ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸಚಿವರು ಆತ್ಮಹತ್ಯೆಗೆ ನೇರ ಹೊಣೆಯಾಗಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇದಲ್ಲದೆ, ಅವರು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ನಾಯಕರಲ್ಲಿ ತಮ್ಮ ಪತ್ನಿ ಮತ್ತು ಮಗುವಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆಂದು ಹೇಳಲಾದ ವಾಟ್ಸ್ ಆ್ಯಪ್ ಸಂದೇಶದ ಪ್ರತಿಯನ್ನು ನಿಮ್ಮ ಪರಿಗಣನೆಗಾಗಿ ಇಲ್ಲಿ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.

ಕೆ.ಎಸ್.ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಐಪಿಸಿ ಯ ಸೆಕ್ಷನ್-306 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್-13 ಮತ್ತು ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯನ್ನು ತಕ್ಷಣವೇ ದಾಖಲಿಸಬೇಕು. ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು. ಇದೆಲ್ಲಕ್ಕೂ ತಾವು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.