ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು : ಬಸನಗೌಡ ಪಾಟೀಲ್ ಯತ್ನಾಳ್.

85
firstsuddi

ಮೈಸೂರು : ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇಂದು ಜಿಲ್ಲೆಯ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅನ್ ಲಾಕ್ ಆರಂಭವಾದ ಹಿನ್ನೆಲೆ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದೇನೆ. ದುಷ್ಟರ ಸಂಹಾರ ಮಾಡು ಅಂತ ತಾಯಿ ಬಳಿ ಬೇಡಿಕೊಂಡಿದ್ದೇನೆ. ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿರುವುದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕೆಟ್ಟವರಿಗೆ ಕೊನೆಗಾಲ ಅಂತ ಇದ್ದೇ ಇರುತ್ತೆ, ಅಲ್ಲಿವರೆಗೂ ಕಾಯೋಣ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ. ಯಡಿಯೂರಪ್ಪ ಅವರಗಿಂತ ದೊಡ್ಡ ನಾಯಕರು ಲಿಂಗಾಯತ ಸಮುದಾಯದಲ್ಲಿದ್ದಾರೆ. ಪರ್ಯಾಯ ನಾಯಕ ಇಲ್ಲ ಅನ್ನೋದು ಸುಳ್ಳು. ಯಡಿಯೂರಪ್ಪ ಅವರಿಂದ ಲಿಂಗಾಯತ ಸಮುದಾಯ ಸಮಾಜದ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಯಡಿಯೂರಪ್ಪ ಬದಲಾವಣೆ ಇಲ್ಲ ಅಂತಾ ರಾಷ್ಟ್ರೀಯ ಅಧ್ಯಕ್ಷರು ಹೇಳಲಿ. ಅವತ್ತು ನಾಯಕತ್ವ ಬದಲಾವಣೆ ಮುಗಿದ ಅಧ್ಯಯ ಅಂತಾ ಒಪ್ಪಿಕೊಳ್ತಿನಿ ಎಂದು ಹೇಳಿದರು.

ದಕ್ಷಿಣ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ. ಲವ್ ಜಿಹಾದ್ ತಡೆಯಲು ಮಠಾಧೀಶರು ಮುಂದಾಗಬೇಕು. ಸಿಎಂ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡಬಾರದು. ನಿಮಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ ಎಂದು ಯತ್ನಾಳ್ ಗುಡುಗಿದರು.

ಇದೆ ವೇಳೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಿಎಂ ನಿವಾಸ ಕಾವೇರಿ ಹಿಂಭಾಗದಲ್ಲಿ ಗೆಸ್ಟ್ ಗೌಸ್ ಇದೆ. ಇವರ ಎಲ್ಲ ಡೀಲ್ ಗಳೂ ಅಲ್ಲೇ ನಡೆಯೋದು. ಸಿಸಿಬಿ ಪೊಲೀಸರು ಅಲ್ಲಿಗೆ ಯಾಕೆ ರೈಡ್ ಮಾಡಲ್ಲ ಎಂದು ಪ್ರಶ್ನೆ ಮಾಡಿದರು.