ಬೆಂಗಳೂರು : ವರದಕ್ಷಿಣೆಗಾಗಿ ಗೃಹಿಣಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಟಿ.ಸಿ. ಪಾಳ್ಯದಲ್ಲಿ ನಡೆದಿದೆ. ಗೃಹಿಣಿ ಮಾಲಾ ಎಂಬುವವರಿಗೆ ತಮ್ಮ ಪತಿ ಹಾಗೂ ಕುಟುಂಬಸ್ಥರು ಸೇರಿ ಕಿರುಕುಳ ನೀಡಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದ ಮಾಲಾ ಅವರು ಕಳೆದ ಒಂದು ವರ್ಷದ ಹಿಂದೆ ಸೂರಜ್ ಸಿಂಗ್ ಎಂಬುವವರನ್ನು ವಿವಾಹವಾಗಿದ್ದರು. ಮಾಲಾ ಅವರ ಪೋಷಕರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯ ಬಳಿಕ ದಂಪತಿ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಮಹಿಳೆಗೆ ತನ್ನ ಮನೆಯಿಂದ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಪತಿ ಹಾಗೂ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮನೆಯಲ್ಲಿ ಯಾರು ಇಲ್ಲದ ವೇಳೆ ಮಾಲಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಮಾಲಾ ಅವರ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










