ವಿಜಯಪುರ : ತಪ್ಪು ಮಾಹಿತಿಯಿಂದ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಮತಯಂತ್ರ ಕೆಟ್ಟಲ್ಲಿ ಬಳಕೆ ಮಾಡಲು ಇವಿಎಂ, ವಿವಿಪ್ಯಾಟ್ ಮಷಿನ್ ಗಳನ್ನು ರಿಸರ್ವ್ ಇಡಲಾಗಿತ್ತು. ಆದ್ರೆ ವಾಪಸ್ ತರೋದನ್ನ ಗಮನಿಸಿ ಜನರು ಸಿಬ್ಬಂದಿಗಳನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ ಕೋಪಗೊಂಡ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ.
ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ವೇಳೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಲಾಗಿದೆ. ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ 25-30 ಜನರನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್‌ಗಳು ಹಾಗೂ ಕಾರನ್ನು ಹಾನಿಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಪಿ ಹೆಚ್‌ಡಿ ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.










