ವಿಷ ಕುಡಿದು ಪತಿ ಸಾವು – ಮಗುವನ್ನು ಕೊಂದು ಪತ್ನಿ ನೇಣಿಗೆ ಶರಣು…

66
firstsuddi

ಬೆಳಗಾವಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ, ಪತ್ನಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಹೊಳೆಪ್ಪ ಮಾರುತಿ ಮಸ್ತಿ (25), ಈತನ ಪತ್ನಿ ವಾಸಂತಿ (22) ಹಾಗೂ ಒಂದೂವರೆ ವರ್ಷದ ಮಗು ಮೃತ ದುರ್ದೈವಿ.

ಮದ್ಯದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದ ಹೊಳೆಪ್ಪ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಉದ್ದೇಶದಿಂದ ವಿಷ ಕುಡಿದಿದ್ದನು. ತಕ್ಷಣ ಸ್ನೇಹಿತರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮನನೊಂದ ಪತ್ನಿ ವಾಸಂತಿ ಕೂಡ ತಮ್ಮ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗುವನ್ನು ಎತ್ತಿಕೊಂಡು ಊರ ಹೊರಗಿನ ಹೊಲಕ್ಕೆ ಹೋಗಿದ್ದ ವಾಸಂತಿ ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ಹುಡುಕಾಟ ನಡೆಸಿದ್ದು, ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಾಸಂತಿಯ ಶವ ಕಂಡುಬಂದಿದೆ. ವಾಸಂತಿ ಕಾಲಿನಡಿ ಪುಟ್ಟ ಮಗುವಿನ ಮೃತದೇಹ ಬಿದ್ದಿತ್ತು. ಇವರಿಗೆ ಮೂರು ವರ್ಷದ ಮತ್ತೊಬ್ಬಳು ಪುತ್ರಿ ಇದ್ದು, ಆಟವಾಡಲು ಹೊರಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ.

ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.