ಹಾಸನ: ಹಾಸನಾಂಬೆ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಲು ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ವಿದ್ಯುತ್ ಶಾಕ್ ಹೊಡಿದಿದೆ. ಇದರಿಂದ ಭಕ್ತರು ಭಯಗೊಂಡು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿದೆ.
ವರ್ಷಕ್ಕೆ ಒಂದು ಬಾರಿ ತೆರೆಯಲ್ಪಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 2 ರಿಂದ ತೆರೆದಿದ್ದು ಇಂದು ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.
ಮಧ್ಯಾಹ್ನ 12.30ರ ವೇಳೆ ಉಚಿತ ದರ್ಶನದ ಸಾಲಿ ಹಾಕಿದ್ದ ಬ್ಯಾರಿಕೇಡ್ನಲ್ಲಿ ವಿದ್ಯುತ್ ಪ್ರವಹಿಸಿದೆ. ಬ್ಯಾರಿಕೇಡ್ ವಿದ್ಯುತ್ ಪ್ರವಹಿಸಿದ್ದನ್ನು ಕಂಡು ಸಾಲಿನಲ್ಲಿದ್ದ ಭಕ್ತರು ಜೀವ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಎಂದು ಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ.
ಕೂಡಲೇ ಅಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. 20 ಮಂದಿಗೆ ಕರೆಂಟ್ ಶಾಕ್ ಹೊಡೆದಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಸರತಿ ಸಾಲಿನಲ್ಲಿ ನಿಂತ ಕೆಲವರಿಗೆ ವಿದ್ಯುತ್ ತಗುಲಿದೆ. ಇದರಿಂದ ಒಬ್ಬರ ಮೇಲೋಬ್ಬರು ಬಿದ್ದಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಕೇವಲ ರಾಜಕಾರಣಿಗಳಿಗೆ, ಸಿನಿಮಾದವರಿಗೆ, ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ಮಾತ್ರ ಸಕಲ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜಕನಿಕರು ಅಮ್ಮನ ದರ್ಶನ ಮಾಡುವುದಕ್ಕೆ ಇಕ್ಕಟ್ಟಿನಲ್ಲೇ ಹೋಗಬೇಕು ಎಂದು ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.










