ತಿರುವನಂತಪುರಂ : ಮನೆಗೆ ಬೆಂಕಿ ತಗುಲಿ, ಮಗು ಸೇರಿ ಐವರು ಸಜೀವ ದಹನವಾಗಿರುವ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ.
ಇಂದು ನಸುಕಿನ ಜಾವ 1.45ರ ವೇಳೆಗೆ ವರ್ಕಳ ಸಮೀಪದ ಚೆರುನ್ನಿಯೂರಿನ ದವಳಪುರಂನಲ್ಲಿ ಪ್ರತಾಪನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರತಾಪನ್ (64), ಅವರ ಪತ್ನಿ ಶೇರ್ಲಿ (53), ಕಿರಿಯ ಮಗ ಅಖಿಲ್ (25), ಹಿರಿಯ ಮಗನ ಪತ್ನಿ ಅಭಿರಾಮಿ (24) ಮತ್ತು ಎಂಟು ತಿಂಗಳ ಮೊಮ್ಮಗ ರಾಯನ್ ಎಂದು ಗುರುತಿಸಲಾಗಿದೆ. ಇನ್ನೂ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರಂತದಲ್ಲಿ ಐದು ಬೈಕ್ ಗಳು ಧ್ವಂಸಗೊಂಡಿವೆ. ಮನೆಯಲ್ಲಿದ್ದ ಎಸಿ ಕೂಡ ಸಂಪೂರ್ಣವಾಗಿ ಹಾಳಾಗಿವೆ. ಮನೆಗೆ ಬೆಂಕಿ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯು ಮನೆಯನ್ನು ಸಂಪೂರ್ಣವಾಗಿ ಆವರಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ತನಿಖೆ ಶುರು ಮಾಡಲಾಗುತ್ತದೆ ಎಂದು ಗ್ರಾಮಾಂತರ ಎಸ್ಪಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.










