ಬೆಂಗಳೂರು : ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ “ಕನ್ನಡ ಚಿತ್ರರಂಗದ ಹೆಮ್ಮೆ” ಪ್ರಶಸ್ತಿ ಲಭಿಸಿದೆ. ಹಲವು ವರ್ಷದ ಬಳಿಕ ಸುದೀಪ್ ಅವರು ಚೆನ್ನೈನಲ್ಲಿ ನಡೆದ ಜೀ ತಮಿಳು ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ “ಕನ್ನಡ ಚಿತ್ರರಂಗದ ಹೆಮ್ಮೆ” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುದೀಪ್ ಅವರು ಸ್ವತಃ ತಾವೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಸುದೀಪ್ ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವವನ್ನು ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, “ ಹಲವು ವರ್ಷಗಳ ಬಳಿಕ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸ್ವಲ್ಪ ವಿಚಿತ್ರ ಎನಿಸಿತು. ಹಾಗೆಯೇ ಬಹಳ ಸಂತೋಷವಾಯಿತು. ನಾನು ನನ್ನ ಸ್ನೇಹಿತನಿಗಾಗಿ ಈ ನಿರ್ಧಾರವನ್ನು ಬದಲಾಯಿಸಿದ್ದೇನೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೆಲವರಿಗೆ ತುಂಬಾ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಸುದೀಪ್ ಅವರು ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ನಟ ರವಿಶಂಕರ್, ರಘುರಾಮ್, ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನ ಸೇರಿದಂತೆ ಹಲವರು ರೀ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ.










