ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ಬಳಿ ಭಾರೀ ಮೇಘಸ್ಫೋಟವಾಗಿದೆ. ಪರಿಣಾಮ 15 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮೇಘಸ್ಫೋಟದ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆ ಇದ್ದು, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಇರುವ ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ನಿನ್ನೆ ಸಂಜೆ 5.30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದ್ದು ಅಮರನಾಥ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗಾಗಲೇ ಘಟನೆಯಲ್ಲಿ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಗೊಂಡ ಹಲವರನ್ನು ಏರ್ ಲಿಫ್ಟ್ ಮಾಡಿ ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಿಂದಲೂ ಸಾಕಷ್ಟು ಭಕ್ತರು ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಹಾಗಾಗಿ ಅಮರನಾಥ ಯಾತ್ರೆಗೆ ತೆರಳಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಹೆಲ್ಪ್ ಲೈನ್ ನನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೆಲ್ಪ್ ಲೈನ್ ನಂಬರ್ – 080-1070, 22340676ಗೆ ಕರೆ ಮಾಡಬಹುದಾಗಿದೆ.
43 ದಿನಗಳ ಯಾತ್ರೆಯು ಕಳೆದ ಗುರುವಾರ ಆರಂಭವಾಗಿದ್ದು ಅಗಸ್ಟ್ 11 ರಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.










