ಅಸನಿ ಚಂಡಮಾರುತ ಪ್ರಭಾವ ; ಆಂಧ್ರದ ಕರಾವಳಿ ತೀರಕ್ಕೆ ತೇಲಿ ಬಂತು ಚಿನ್ನದ ರಥ!

81
firstsuddi

ಅಮರಾವತಿ : ಅಸನಿ ಚಂಡಮಾರುತದ ಪ್ರಭಾವದಿಂದಾಗಿ ನಿನ್ನೆ ಸಂಜೆ ಆಂಧ್ರಪ್ರದೇಶದ ಶ್ರೀಕುಕಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ.

ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥೈಲ್ಯಾಂಡ್ ನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಇದನ್ನು ದಡಕ್ಕೆ ಎಳೆದಿದ್ದಾರೆ.  ರಥವು ಆಗ್ನೇಯ ಏಷ್ಯಾದ ದೇಶಗಳ ಮಠದ ಆಕಾರವನ್ನು ಹೋಲುತ್ತದೆ. ಅಸನಿ ಚಂಡಮಾರುತದ ಪ್ರಭಾವದಿಂದ ರಥವು ಆಂಧ್ರಪ್ರದೇಶ ಕರಾವಳಿಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು.

ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು.

ಕಳೆದ ಕೆಲವು ದಿನಗಳಿಂದ ಚಂಡಮಾರುತದಿಂದಾಗಿ ಆಂಧ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ, ಗುಂಟೂರು, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶದಲ್ಲಿ ಗಂಟೆಗೆ 75-95 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಮತ್ತು ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ.