ದಿಸ್ಪುರ್ : ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಿನ್ನೆ ತಡರಾತ್ರಿ ಅಸ್ಸಾಂನ ನಾವಾಂಗ್ ಜಿಲ್ಲೆಯ ಕಂಪುರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಕಾನ್ ಸ್ಟೇಬಲ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಕಂಪುರದ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ನೇತೃತ್ವದಲ್ಲಿ ಪ್ರಕರಣವೊಂದರ ತನಿಖೆಗೆ ಹೋದಾಗ, ಈ ವೇಳೆ ಕಾನ್ ಸ್ಟೇಬಲ್ ರಾಜೀಬ್ ಬೊರ್ಡೊಲೊಯ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಲು ಸಮುತ್ಜಲ್ ಕಾಕೋಟಿ ನೀರಿಗೆ ಧುಮುಕಿದ್ದು, ದುರದೃಷ್ಟವಶಾತ್ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದರು. ಇಂದು ಮುಂಜಾನೆ ರಾಜೀಬ್ ಬೊರ್ಡೊಲೊಯ್ ಶವ ಪತ್ತೆಯಾಗಿತ್ತು. ಆದರೆ, ಸಮುತ್ಜಲ್ ಕಾಕೋಟಿ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹವು ಪತ್ತೆಯಾಗಿದೆ.
ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ನೆರೆಯ ದೇಶ ಭೂತಾನ್ ನಲ್ಲಿ ಧಾರಾಕಾರ ಮಳೆಯಿಂದಾಗಿ ರಾಜ್ಯದ ಎಲ್ಲ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆ ಕಂಡಿದೆ. ಅನೇಕ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.










