ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್.. ರಿಕ್ಷಾದಲ್ಲೇ ಪ್ರಯಾಣ

75
firstsuddi

ಗಾಂಧೀನಗರ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರು ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿ, ಗಮನ ಸೆಳೆದಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರದ ಸಲುವಾಗಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್, ನಿನ್ನೆ ಮಧ್ಯಾಹ್ನ ಆಟೋರಿಕ್ಷಾ ಚಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಆಟೋ ಚಾಲಕ ವಿಕ್ರಂ ದಾಂತಾನಿ ಎಂಬುವರು ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಆಟೋ ಚಾಲಕನ ಆಹ್ವಾನವನ್ನು ಸ್ವೀಕರಿಸಿದ ಕೇಜ್ರಿವಾಲ್ ಅವರು ರಾತ್ರಿ 7.30ರ ಸುಮಾರಿಗೆ ಹೊಟೇಲ್ ನಿಂದ ಆಟೋದಲ್ಲಿ ಚಾಲಕನ ಮನೆಗೆ ತಲುಪಲು ಯೋಜಿಸಿದ್ದರು. ಮೊದಲಿಗೆ ಕೇಜ್ರಿವಾಲ್ ಅವರನ್ನು ಆಟೋದಲ್ಲಿ ಹೋಗದಂತೆ ಪೊಲೀಸರು ತಡೆದರು. ಇದರಿಂದ ಕೆಲ ಹೊತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ತದನಂತರ ಆಟೋದಲ್ಲಿ ತೆರಳಲು ಅವಕಾಶ ನೀಡಲಾಗಿದೆ. ಆಟೋ ಚಾಲಕನ ಮನೆಗೆ ಭೇಟಿ ನೀಡಿ ಊಟ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಿರುದ್ಯೋಗಿ ಯುವಕನಿಗೂ ಮಾಸಿಕ 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಹಾಗೂ ಪ್ರತಿಯೊಬ್ಬರಿಗೂ ಉದ್ಯೋಗ ನೀಡಲಾಗುವುದು ಎಂದು ಭರ್ಜರಿ ಘೋಷಣೆ ಮಾಡಿದ್ದಾರೆ.