ಆಸ್ತಿ ವಿಚಾರ – ಮಹಿಳೆಯ ಬರ್ಬರ ಕೊಲೆ!

148
firstsuddi

ಆನೇಕಲ್ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆ ಬೆಂಗಳೂರು ಹೊಸೂರು ಮುಖ್ಯರಸ್ತೆ ಹೊಸರೋಡ್ ಬಳಿ ನಡೆದಿದೆ.

ಜಿಗಣಿ ಮೂಲದ ಅರ್ಚನಾ ರೆಡ್ಡಿ (38) ಎಂಬುವರು ಕೊಲೆಯಾದ ಮಹಿಳೆ. ಅರ್ಚನಾರೆಡ್ಡಿಯ ಎರಡನೇ ಪತಿ ನವೀನ್ ಕುಮಾರ್ ಹಾಗೂ ಸಹಚರರಿಂದ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.

ಅರ್ಚನಾ ರೆಡ್ಡಿ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ನವೀನ್ ಕುಮಾರ್ ಜೊತೆ ಇದ್ದಳು. ಇತ್ತೀಚೆಗೆ ಚನ್ನಪಟ್ಟಣ ಬಳಿಯ ಆಸ್ತಿಯೊಂದರ ಸಲುವಾಗಿ ಇಬ್ಬರ ನಡುವೆ ಜಗಳವಾಗಿದೆ. ಅಂದಿನಿಂದ ಅರ್ಚನಾ ರೆಡ್ಡಿ ಮೊದಲ ಪತಿಯ ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದಳು. ನಿನ್ನೆ ಜಿಗಣಿ ಪುರಸಭೆಯ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ಜಿಗಣಿಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದಿದ್ದ ನವೀನ್ ಕುಮಾರ್, ತನ್ನ ಸಹಚರರೊಂದಿಗೆ ಹೊಸರೋಡ್ ಬಳಿ ಕಾದು ಕುಳಿತಿದ್ದರು.

ಮತದಾನ ಮುಗಿಸಿ ಮಗ ಮತ್ತು ಕಾರಿನ ಚಾಲಕ ಹಾಗೂ ಇಬ್ಬರು ಯುವಕರ ಜೊತೆ ಬೆಳ್ಳಂದೂರು ಕಡೆ ಹೊರಟಿದ್ದ ಅರ್ಚನಾ ರೆಡ್ಡಿ ವಾಹನ ಅಡ್ಡ ಹಾಕಿ ನವೀನ್ ಕುಮಾರ್ ಹಾಗೂ ಸಹಚರರು ಹಾಕಿ ಸ್ಟಿಕ್ ಹಾಗೂ ಲಾಂಗ್‌ನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ಮಗ ಹಾಗೂ ಚಾಲಕ ತಪ್ಪಿಸಿಕೊಂಡಿದ್ದಾರೆ. ನವೀನ್ ಕುಮಾರ್ ಹಾಗೂ ಸಹಚರರು ಅರ್ಚನಾಳನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.