ದೇಶದಲ್ಲಿ ಕೋವೊವ್ಯಾಕ್ಸ್, ಕಾರ್ಬೆವ್ಯಾಕ್ಸ್ ಲಸಿಕೆ, ಮೊಲ್ನುಪಿರವಿರ್ ಮಾತ್ರೆ ತುರ್ತು ಬಳಕೆಗೆ ಅನುಮೋದನೆ…

139
firstsuddi

ನವದೆಹಲಿ : ದೇಶದಲ್ಲಿ ಇನ್ನೆರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವೊವ್ಯಾಕ್ಸ್ ಮತ್ತು ಬಯಾಲಾಜಿಕಲ್ ಇ ಸಂಸ್ಥೆಯ ಕಾರ್ಬೆವ್ಯಾಕ್ಸ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು, ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೋವಿಡ್ ಲಸಿಕೆಗಳಾದ ಕೋವೊವ್ಯಾಕ್ಸ್, ಕಾರ್ಬೆವ್ಯಾಕ್ಸ್ ಹಾಗೂ ಆಂಟಿ-ವೈರಲ್ ಡ್ರಗ್ ಮೊಲ್ನುಪಿರವಿರ್ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಕೋವೊವ್ಯಾಕ್ಸ್, ಕಾರ್ಬೆವ್ಯಾಕ್ಸ್ ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ಹಾಗೇ, ರೋಗದ ಅಪಾಯ ತೀವ್ರವಾಗಿದ್ದು, ಅಪಾಯದಲ್ಲಿರುವ ರೋಗಿಗಳ ಚಿಕಿತ್ಸೆಗೆ ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದೂ ಸಮಿತಿ ಹೇಳಿತ್ತು. ಈ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಾನ್ಯ ಮಾಡಿದೆ.

ಈ ಅನುಮೋದನೆಯೊಂದಿಗೆ, ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಕೊರೊನಾ ಲಸಿಕೆಗಳ ಸಂಖ್ಯೆ 8ಕ್ಕೆ ಏರಿದೆ. ಈ ಹಿಂದೆ ಸೀರಮ್ ಇನ್‌ ಸ್ಟಿಟ್ಯೂಟ್‌ ನ ಕೋವಿಶೀಲ್ಡ್, ಭಾರತ್ ಬಯೋಟೆಕ್‌ ನ ಕೋವಾಕ್ಸಿನ್, ಝೈಡಸ್ ಕ್ಯಾಡಿಲಾದ ZyCoV-D, ರಷ್ಯಾದ ಸ್ಪುಟ್ನಿಕ್ ಗಿ ಮತ್ತು US-ನಿರ್ಮಿತ ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ಅನುಮೋದನೆ ಪಡೆದುಕೊಂಡಿದ್ದವು. ಈಗ ಕೋವೊವ್ಯಾಕ್ಸ್ ಮತ್ತು ಕಾರ್ಬೆವ್ಯಾಕ್ಸ್ ಕೂಡ ಸೇರ್ಪಡೆಗೊಂಡಿದ್ದು, ಕೊರೊನಾ ವಿರುದ್ಧ ಹೋರಾಟಕ್ಕೆ ಬಲಬಂದಂತೆ ಆಗಿದೆ.