ಚಿಕ್ಕಮಗಳೂರು : ದೇವೀರಮ್ಮನ ಬೆಟ್ಟ ಹತ್ತುವ ಭಕ್ತರಿಗೆ ಹೊಸ ನಿಯಮ – ಎರಡು ದಿನ ಮಾತ್ರ ಅವಕಾಶ, ರಾತ್ರಿ ಬೆಟ್ಟ ಏರುವುದಕ್ಕೆ ನಿರ್ಬಂಧ!

2

ರಾತ್ರಿ ಬೆಟ್ಟ ಏರುವುದಕ್ಕೆ ನಿರ್ಬಂಧ; 15ರಿಂದ 60 ವರ್ಷದೊಳಗಿನವರಿಗೆ ಮಾತ್ರ ಅನುಮತಿ

ಚಿಕ್ಕಮಗಳೂರು: ಕಾಫಿನಾಡಿನ ಶಕ್ತಿದೇವತೆ, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಬಿಂಡಿಗ ದೇವೀರಮ್ಮನ ಜಾತ್ರೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿರುವ ದೇವೀರಮ್ಮನ ಬೆಟ್ಟ ಹತ್ತುವ ಭಕ್ತರಿಗೆ ಈ ಬಾರಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಈ ಬಾರಿ ಕೇವಲ ಎರಡು ದಿನಗಳ ಕಾಲ ಮಾತ್ರ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದ್ದು, 15 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನವರಿಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನವೆಂಬರ್ 7ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಹಾಗೂ ನವೆಂಬರ್ 8ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಭಕ್ತರು ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ದೇವೀರಮ್ಮನ ಬೆಟ್ಟವು ಕಿರಿದಾದ ಹಾಗೂ ದುರ್ಗಮ ಹಾದಿಯನ್ನು ಹೊಂದಿದೆ. ವರ್ಷಕ್ಕೊಮ್ಮೆ ಮಾತ್ರ ಬೆಟ್ಟದ ತುದಿಯಲ್ಲಿ ದೇವೀರಮ್ಮ ದರ್ಶನ ನೀಡುವುದರಿಂದ ಪ್ರತಿವರ್ಷ ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಾರೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಭಕ್ತರ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ. ಸಾವಿರಾರು ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್‌ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಬೆಟ್ಟವನ್ನೇರಿ ಸ್ಥಳ ಪರಿಶೀಲನೆ ನಡೆಸಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದುರ್ಗಮ ಹಾದಿಯಲ್ಲಿ ಬೆಟ್ಟ ಏರುವ ಭಕ್ತರು ಜಿಲ್ಲಾಡಳಿತದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ದೇವೀರಮ್ಮನ ದರ್ಶನ ಪಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.