ಚಿಕ್ಕಮಗಳೂರು: ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸಿದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್ಐಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿ. ಚಿಕ್ಕಮಗಳೂರಿನಲ್ಲಿ ಕೆಫೆ ನಡೆಸುತ್ತಿದ್ದ ನಿವೇದಿತಾ, ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ಮಾದರಿಯ ಕಟಿಂಗ್ ಹಾಗೂ ಉಡುಪು ಧರಿಸುತ್ತಿದ್ದಳು ಎನ್ನಲಾಗಿದೆ.
ಕೆಫೆಗೆ ಬರುತ್ತಿದ್ದ ಮಹಿಳೆಯರು ಹಾಗೂ ಯುವಕರನ್ನು ಪರಿಚಯ ಮಾಡಿಕೊಂಡು, ತಾನು ಪಿಎಸ್ಐ ಎಂದು ನಂಬಿಸಿ ಹಣ ಹಾಗೂ ಚಿನ್ನ ಪಡೆದು ವಂಚಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಚಯಸ್ಥರಿಂದ ಐಷಾರಾಮಿ ಕಾರುಗಳನ್ನು ಪಡೆದು, ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆರೋಪವೂ ಕೇಳಿಬಂದಿದೆ.
ನಿವೇದಿತಾ ವಿರುದ್ಧ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ 25ಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮೋಸಕ್ಕೊಳಗಾದ 20ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚಿಸಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಂಚನೆಯಿಂದ ಪಡೆದ ಹಣ ಹಾಗೂ ಚಿನ್ನವನ್ನು ತನ್ನ ಪ್ರಿಯಕರ ದೇವುಗೆ ನೀಡಿರುವುದಾಗಿ ನಿವೇದಿತಾ ವಿಚಾರಣೆ ವೇಳೆ ಹೇಳಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವು ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನಿವೇದಿತಾಳ ಮೊಬೈಲ್ ಪರಿಶೀಲನೆ ವೇಳೆ ಬೇರೆ ಬೇರೆ ಹೆಸರುಗಳಲ್ಲಿ ತಯಾರಿಸಲಾಗಿದ್ದ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ. ಕರ್ತವ್ಯಕ್ಕೆ ರಜೆ ಪಡೆದು ಬಂದಿರುವುದಾಗಿ ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ವಂಚನೆಗೊಳಗಾದವರ ನಿಖರ ಸಂಖ್ಯೆ ಹಾಗೂ ವಂಚನೆಯ ಒಟ್ಟು ಮೊತ್ತದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.










