ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಕತ್ತಲೆಯಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ 26 ವರ್ಷದ ಯುವಕ ಮೃತಪಟ್ಟಿರುವ ಘಟನೆ ಕೊಪ್ಪ ತಾಲೂಕಿನ ಕಡೇಮನೆ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಚೇತನ್ (26) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಚೇತನ್ ಸೇರಿದಂತೆ ಏಳು ಮಂದಿ ಸ್ನೇಹಿತರು ಶಿಕಾರಿಗೆ ತೆರಳಿದ್ದರು ಎನ್ನಲಾಗಿದೆ.
ಶಿಕಾರಿ ವೇಳೆ ಕತ್ತಲೆಯಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಚೇತನ್ ಗಂಭೀರವಾಗಿ ಗಾಯಗೊಂಡಿದ್ದರು. ಜೊತೆಗಿದ್ದ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಚೇತನ್ ಮೃತಪಟ್ಟಿದ್ದಾರೆ.
ಘಟನೆ ಬಳಿಕ ಚೇತನ್ ಅವರನ್ನು ಆಸ್ಪತ್ರೆಗೆ ಕರೆತಂದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಿಕಾರಿಗೆ ತೆರಳಿದ್ದ ಏಳು ಮಂದಿಯಲ್ಲಿ ಮೂವರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










