ಯುವ ಕವಿಗಳ ಕವಿಗೋಷ್ಠಿಗೆ ಅವಕಾಶವಿಲ್ಲ; ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸದಿರುವುದಕ್ಕೆ ಆಕ್ರೋಶ
ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವೇ ನೈಜ ಸಾಹಿತಿಗಳನ್ನು ಹೊರತುಪಡಿಸಿದರೆ, ರಾಜಕೀಯ ಹಿನ್ನೆಲೆಯುಳ್ಳವರೇ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಸಮ್ಮೇಳನದಲ್ಲಿ ಯುವ ಕವಿಗಳ ಕವಿಗೋಷ್ಠಿಗೆ ಅವಕಾಶ ಕಲ್ಪಿಸದಿರುವುದು ಯುವ ಸಾಹಿತಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ ಹಾಗೂ ಬಹಿರಂಗ ಅಧಿವೇಶನಗಳನ್ನು ಹೊರತುಪಡಿಸಿದರೆ, ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವಂತಹ ಗೋಷ್ಠಿಗಳಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಗೋಷ್ಠಿಗಳಿಗೇ ಸೂಕ್ತ ಅವಕಾಶವಿಲ್ಲದ ಇಂತಹ ಸಾಹಿತ್ಯ ಸಮ್ಮೇಳನಗಳ ಅಗತ್ಯವೇನು ಎಂದು ಯುವ ಸಾಹಿತಿ ಪ್ರಿಯಾಂಕ ಪ್ರಶ್ನಿಸಿದ್ದಾರೆ.
ವೇದಿಕೆಯಲ್ಲಿ ಆಸೀನರಾಗಿರುವ ಕೆಲವರು ಎಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ? ಅವರು ಬರೆದಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಿ ನಮ್ಮಂತಹ ಯುವ ಕವಿಗಳಿಗೆ ಪರಿಚಯಿಸಲಿ. ಇದರಿಂದ ಅವರ ಸಾಹಿತ್ಯಿಕ ಕೊಡುಗೆಯಾದರೂ ಯುವಪೀಳಿಗೆಗೆ ತಿಳಿಯುತ್ತದೆ ಎಂದು ಪ್ರಿಯಾಂಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜ್ಯದ ವಿವಿಧ ಭಾಗಗಳ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ, ಅವರ ಅನುಭವ, ವಿಚಾರಧಾರೆ ಹಾಗೂ ಸಾಹಿತ್ಯಿಕ ಭಾಷಣಗಳಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇಂತಹ ಸಾಹಿತಿಗಳ ಮಾತುಗಳನ್ನು ಆಲಿಸುವ ಮೂಲಕ ಯುವಪೀಳಿಗೆ ಸಾಹಿತ್ಯದತ್ತ ಆಕರ್ಷಿತರಾಗಿ, ತಾವೂ ಬರಹಗಾರರಾಗಬೇಕೆಂಬ ಆಸಕ್ತಿ ಬೆಳೆಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಲೋಕವನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಬದಲು ಪರಿಷತ್ತಿನ ಘಟಕಗಳನ್ನು ವಿಭಜಿಸುವ ಕಾರ್ಯಕ್ಕೆ ಜಿಲ್ಲಾಧ್ಯಕ್ಷ ಅಜ್ಜಂಪುರ ಶ್ರೀನಿವಾಸ್ ಮುಂದಾಗಿರುವುದು ದುರದೃಷ್ಟಕರ ಎಂದು ಸಾಹಿತ್ಯ ಪ್ರೇಮಿ ಹಾಗೂ ಪತ್ರಕರ್ತ ರಾಘವೇಂದ್ರ ಕೆಸವಳಲು ಟೀಕಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಂದೇ ಘಟಕವನ್ನು ಮೂರು ಘಟಕಗಳಾಗಿ ವಿಭಜಿಸುವ ಮೂಲಕ ಸಾಹಿತ್ಯದ ಗಂಧಗಾಳಿಯೂ ಗೊತ್ತಿಲ್ಲದವರಿಗೆ ಅವಕಾಶ ಕಲ್ಪಿಸಿದಂತಾಗಿದೆ. ಮಹಿಳಾ ಘಟಕ ಹಾಗೂ ಯುವ ಘಟಕಗಳ ರಚನೆಯ ಮೂಲ ಉದ್ದೇಶವೇನು? ಘಟಕಗಳ ರಚನೆಯ ಹೆಸರಿನಲ್ಲಿ ಸಾಹಿತಿಗಳನ್ನು ವಿಭಜಿಸಿ ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ತರುವುದು ಎಷ್ಟು ಸಮಂಜಸ? ಜಿಲ್ಲಾಧ್ಯಕ್ಷರ ವೈಯಕ್ತಿಕ ಪ್ರತಿಷ್ಠೆಗಾಗಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಖಂಡನೀಯ. ಇದೇ ರೀತಿ ಮುಂದುವರಿದರೆ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಚಟುವಟಿಕೆಗಳ ಕೇಂದ್ರವಾಗುವ ಬದಲು ‘ಸಾಹಿತ್ಯವಿಲ್ಲದ ಉದ್ಯಮ ಪರಿಷತ್ತು’ ಎಂಬ ಟೀಕೆಗೆ ಗುರಿಯಾಗುವ ದಿನ ದೂರವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯಕ್ಕೆ ಅನುಗುಣವಾಗಿ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ರಾಜಕೀಯ ಹಾಗೂ ಉದ್ಯಮ ಹಿನ್ನೆಲೆಯ ವ್ಯಕ್ತಿಗಳಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಬಾರದು. ಸದಸ್ಯತ್ವವನ್ನು ರಾಜಕೀಯ ಓಟ್ ಬ್ಯಾಂಕ್ ಆಗಿ ಪರಿವರ್ತಿಸದೆ, ನೈಜ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಸಕ್ತರಿಗೆ ಆದ್ಯತೆ ನೀಡಬೇಕು. ಸಾಹಿತ್ಯಿಕ ಕೊಡುಗೆಯನ್ನು ಸದಸ್ಯತ್ವ ಮತ್ತು ಕಾರ್ಯಕಾರಿ ಸಮಿತಿಯ ರಚನೆಗೆ ಪ್ರಮುಖ ಮಾನದಂಡವನ್ನಾಗಿಸಬೇಕು. ಪ್ರಸ್ತುತ ಸದಸ್ಯತ್ವ ವ್ಯವಸ್ಥೆಯನ್ನೂ ಮರುಪರಿಶೀಲಿಸಿ, ನೈಜ ಸಾಹಿತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಜವಾದ ಸಾಹಿತಿಗಳನ್ನು ಗುರುತಿಸಿ ಗೌರವಿಸಿ, ಅವರಿಗೆ ಜವಾಬ್ದಾರಿ ನೀಡಿದಾಗ ಮಾತ್ರ ಪರಿಷತ್ತು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಒತ್ತಾಯಿಸಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ಉತ್ತಮ ಸಾಹಿತ್ಯಿಕ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ನಂದೀಶ್ ಬಂಕೇನಹಳ್ಳಿ, ತೇಜಸ್ವಿಯವರ ಒಡನಾಡಿಯಾಗಿದ್ದ ಧನಂಜಯ ಜೀವಾಳ, ಬೆಟ್ಟಗೆರೆ ಸಂಪತ್, ಬೆಳಗೋಡು ಕಾರ್ತಿಕ್ ಸೇರಿದಂತೆ ಉತ್ತಮ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಅನೇಕ ಪ್ರತಿಭಾವಂತ ಬರಹಗಾರರಿದ್ದಾರೆ. ಇಂತಹ ಸ್ಥಳೀಯ ಪ್ರತಿಭೆಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಸೂಕ್ತ ವೇದಿಕೆ, ಗೌರವ ಹಾಗೂ ಜವಾಬ್ದಾರಿಗಳನ್ನು ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ನೈಜ ಸಾಹಿತ್ಯಾಸಕ್ತರಿಗೆ ದೊರೆಯಬೇಕು ಎಂದು ರಾಘವೇಂದ್ರ ಕೆಸವಳಲು ಆಗ್ರಹಿಸಿದ್ದಾರೆ.










