ತುಮಕೂರು : ಇಂದು ಡಾ. ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ ಆಗಲಿದ್ದಾರೆ. ಅಮಿತ್ ಶಾ ಬೆಳಗ್ಗೆ 10.30 ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ಪ್ರಯಾಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ್ ಖೂಬಾ, ಸಚಿವರು, ಸಂಸದರು ಸೇರಿದಂತೆ ಹಲವು ಗಣ್ಯರು ಭಾಗಿ ಆಗಲಿದ್ದು, ವೇದಿಕೆ ಮೇಲೆ ಕೂರಲು 22 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಸಿದ್ದಗಂಗಾ ಮಠದ ಗುರುವಂದನಾ ಕಾರ್ಯಕ್ರಮದಲ್ಲಿ 4 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದ್ದು, ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 8 ಕಡೆ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.