ಬೆಂಗಳೂರು : ಕೊಲೆಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಪಳನಿ ಅಲಿಯಾಸ್ ಕರ್ಚೀಫ್ ಪಳನಿ ಬಂಧಿತ ಆರೋಪಿ. ನವೆಂಬರ್ 10 ರಂದು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮುನ್ನಕುಮಾರ್ ಎಂಬುವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ನಿನ್ನೆ ರಾತ್ರಿ 11 ಗಂಟೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಪಳನಿಯನ್ನು ಬಂಧಿಸಿದ್ದಾರೆ.
ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ರೌಡಿ ನಿಗ್ರಹದಳದ ಎಸಿಪಿ ಹೆಚ್.ಎಸ್.ಪರಮೇಶ್ವರ್ ಹಾಗೂ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈತನ ಬಂಧನ ವೇಳೆ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ. ಈ ವೇಳೆ ಸರ್ವೀಸ್ ಪಿಸ್ತೂಲ್ ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
20ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಳನಿ ಮೇಲೆ ಅಶೋಕ ನಗರ, ಸುಬ್ರಹ್ಮಣ್ಯಪುರ ಹಾಗೂ ಬೆಳ್ಳಂದೂರು ಠಾಣೆಯಲ್ಲಿ 3 ಕೊಲೆ ಪ್ರಕರಣಗಳಿವೆ.ಅಲ್ಲದೇ ಅಶೋಕನಗರ, ಕೋಣನಕುಂಟೆ ಹಾಗೂ ಕೆ.ಎಸ್. ಲೇಔಟ್ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣ ದಾಖಲಾಗಿದೆ. ಕಾಡುಗೋಡಿ, ಜಯನಗರ, ಕೋಣನಕುಂಟೆ, ಕೆ.ಎಸ್.ಲೇಔಟ್, ಹುಳಿಮಾವು, ಆಡುಗೋಡಿ, ವಿಲ್ಸನ್ ಗಾರ್ಡನ್ ಠಾಣೆಗಳಲ್ಲಿ ಕೊಲೆ ಯತ್ನ ಪ್ರಕರಣಗಳಿದ್ದು, ಸುಲಿಗೆ, ದರೋಡೆ ಹಾಗೂ ಬೆದರಿಕೆ ಸೇರಿದಂತೆ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.










