ಉಡುಪಿ ನಗರ ಠಾಣಾ ಎಸ್ ಐ ಅನಂತ ಪದ್ಮನಾಭ ಅಮಾನತು ಆದೇಶ ರದ್ದು, ಡಿಸಿಐಬಿಗೆ ವರ್ಗಾವಣೆ…

281
firstsuddi

ಉಡುಪಿ: ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇತ್ತೀಚೆಗೆ ಅಮಾನತುಗೊಂಡಿದ್ದ ಉಡುಪಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಅನಂತ ಪದ್ಮನಾಭ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಉಡುಪಿ ಡಿಸಿಐಬಿಗೆ ವರ್ಗಾವಣೆಗೊಳಿಸಿ ಆದೇಶ ನೀಡಲಾಗಿದೆ. ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನ.2ರಂದು ಗೆಳತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಉಡುಪಿ ನಗರ ಠಾಣಾ ಎಸ್ಸೈ ಅನಂತಪದ್ಮನಾಭ  ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ನ.11ರಂದು ಅಮಾನತುಗೊಳಿಸಿ ಆದೇಶ ನೀಡಿದ್ದರು. ಉಡುಪಿ ನಗರ ಠಾಣಾ ಎಸ್ಸೈ ಅನಂತಪದ್ಮನಾಭ ಅವರನ್ನು ಅಮಾನತುಗೊಳಿಸಿದ್ದಕ್ಕೆ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ವಿವಿಧ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸ್ಪಿ ಮಂಗಳೂರು ಪಶ್ಚಿಮ ವಲಯ ಐಜಿಪಿಯವರಿಗೆ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಐಜಿಪಿ ಎಸ್ಸೈ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ವರ್ಗಾವಣೆ ಮಾಡಿದ್ದಾರೆ.