ಧಾರವಾಡ : ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ. ಮೃತರನ್ನು ಮೌನೇಶ್ ಪತ್ತಾರ(36), ಅರ್ಪಿತಾ(28) ಹಾಗೂ ಸುಕೃತಾ(4) ಎಂದು ಗುರುತಿಸಲಾಗಿದ್ದು, ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕನ ಅಸೂಟಿ ಗ್ರಾಮದವರಾದ ಮೌನೇಶ್ ಪತ್ತಾರ್ ಅವರು ನಗರದ ಟಾಟಾ ಮಾರ್ಕೋಫೋಲೋ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಂಪನಿಯಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಮೌನೇಶ್ ಅವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಾಗಿತ್ತು. ಹೀಗಾಗಿ ಖಿನ್ನತೆಗೊಳಗಾಗಿದ್ದ ಮೌನೇಶ್ ಅವರು ಮೊದಲು ತನ್ನ ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ಬಳಿಕ ತಾನೇ ನೇಣಿಗೆ ಕೊರಳೊಡ್ಡಿದ್ದಾರೆ. ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉಪನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










