ಮೂಡಿಗೆರೆ :ರಾಣಿ ಝರಿ ಟಿಕೆಟ್ ವಸೂಲಿ ವಿಚಾರಕ್ಕೆ ಸ್ಥಳೀಯರ ಪ್ರತಿಭಟನೆ…

34

  ಮೂಡಿಗೆರೆ :ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ‘ರಾಣಿ ಝರಿ ವ್ಯೂ ಪಾಯಿಂಟ್’ ನಲ್ಲಿ ಅರಣ್ಯ ಇಲಾಖೆಯ ಟಿಕೆಟ್ ವಸೂಲಿಗೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ರಾಣಿ ಝರಿಗೆ ಭೇಟಿ ನೀಡಲು ಪ್ರವಾಸಿಗರಿಂದ ಶುಲ್ಕ ವಿಧಿಸುವ ಕ್ರಮದ ವಿರುದ್ಧ ಇಂದು ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲೇ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
“ಪ್ರವಾಸಿಗರಿಂದ ಹಣ ಸುಲಿಗೆ ಮಾಡ್ಬೇಡಿ, ವಸೂಲಿ ಮಾಡ್ಬೇಡಿ”, “ರಾಣಿ ಝರಿ ಪ್ರಕೃತಿ ಸೌಂದರ್ಯ ಸವಿಯಲು ಟಿಕೆಟ್ ಬೇಕೆ?” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಅರಣ್ಯ ಇಲಾಖೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ಈಗಾಗಲೇ ಬಂಡಾಜೆ ಜಲಪಾತಕ್ಕೆ ತೆರಳುವಲ್ಲಿ ತಲಾ ₹300ರ ಶುಲ್ಕ ವಸೂಲಿ ಮಾಡುತ್ತಿದೆ. ಅದೇ ಮಾದರಿಯಲ್ಲಿ ಇದೀಗ ರಾಣಿ ಝರಿ ವ್ಯೂ ಪಾಯಿಂಟ್‌ಗೆ ಸಹ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಯತ್ನಿಸುತ್ತಿರುವುದರಿಂದ ಸ್ಥಳೀಯರಲ್ಲಿ ರೋಷ ಹೆಚ್ಚಾಗಿದೆ.
ಟಿಕೆಟ್ ಕೌಂಟರ್ ಆರಂಭಿಸಲು ಬಂದ ಅರಣ್ಯ ಸಿಬ್ಬಂದಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ “ಟಿಕೆಟ್ ಹಾಕ್ತೀರಂದರೆ ನೋಡೋಣ… ಯಾರಿಗೆ ಆಗುತ್ತೆ ಅಂತ!” ಎಂದು ಸವಾಲು ಹಾಕಿದ ಘಟನೆ ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ.
ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಈ ತಾಣ ಸ್ಥಳೀಯರಿಗೂ ಉದ್ಯೋಗ ಹಾಗೂ ಆದಾಯದ ಮೂಲವಾಗಿದ್ದು, ಟಿಕೆಟ್ ವ್ಯವಸ್ಥೆ ಜಾರಿಯಾದರೆ ಪ್ರವಾಸಿಗರ ಸಂಖ್ಯೆ ಕುಗ್ಗುವ ಸಾಧ್ಯತೆಗಳ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ, ಬಲಿಗೆ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಜನರು ಸೇರಿ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ