ಓಲಾ, ಕ್ಯಾಬ್ ಮೂಲಕ ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಬರಲಿದೆ ಆಮ್ಲಜನಕ ಸಾಂದ್ರಕ…

92
firstsuddi

ಬೆಂಗಳೂರು : ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿರುವ ಕೊರೊನಾ ಸೋಂಕಿತರಿಗೆ ಸಹಾಯವಾಗಲೆಂದು ಮನೆ ಬಾಗಿಲಿಗೆ ಓಲಾ, ಕ್ಯಾಬ್ ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು  ಒದಗಿಸುವ ಕಾರ್ಯಕ್ರಮಕ್ಕೆ ಇಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಾಲನೆ ನೀಡಿದರು.

ಈ ಕೆಲಸದಲ್ಲಿ ಸರಕಾರದ ಜೊತೆ ಗಿವ್ ಇಂಡಿಯಾ ಹಾಗೂ ಓಲಾ ಕ್ಯಾಬ್ ಕಂಪನಿಗಳು ಕೈಜೋಡಿಸಿದ್ದು, ಮೊದಲು ನಗರಕ್ಕೆ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್ ಅವರು, ಮೊಟ್ಟ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಕ್ಸಿಜನ್ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ನಾನು ಆರಂಭ ಮಾಡಿದ್ದೆ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ನಗರಕ್ಕೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ. ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು ಶೇ.94 ಗಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಅವರು ಓಲಾ ಆಪ್ ಮೂಲಕ ಆನ್ ಲೈನ್ ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಅವರಿಗೆ ತಲುಪುತ್ತದೆ. ಸೋಂಕಿತರು 5,000 ರೂ. ಭದ್ರತಾ ಠೇವಣಿ ಇಟ್ಟು ಇವುಗಳನ್ನು ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್ ಪಡೆಯುವಾಗ ಈ ಮೊತ್ತವನ್ನು ಹಿಂದಿರುಗಿಸಲಾಗುವುದು. ಜೊತೆಗೆ ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಸದ್ಯಕ್ಕೆ 500 ಆಕ್ಸಿಜನ್ ಸಾಂದ್ರಕಗಳ ಮೂಲಕ ಈ ನೆಟ್ವರ್ಕ್ ಮಾಡಲಾಗಿದೆ. ಇಂದು ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ವಿದ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ಮತ್ತಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ದಿನಕ್ಕೆ 2.5 ಲಕ್ಷ ಡೋಸ್ ಲಸಿಕೆಯನ್ನು ಒದಗಿಸಲಾಗುತ್ತಿದೆ. ಹೀಗಾಗಿ ಎಲ್ಲಿಯೂ ಲಸಿಕೆ ಸಮಸ್ಯೆ ಇಲ್ಲ. ಒಂದೇ ದಿನ ಏಕಾಎಕಿ ಹೆಚ್ಚು ಜನ ಲಸಿಕೆ ಕೇಂದ್ರಕ್ಕೆ ನುಗ್ಗಬಾರದು. ಮೊದಲು ಬಂದರಿಗೆ ಲಸಿಕೆ ಕೊಡಲಾಗುತ್ತಿತ್ತು. ಇನ್ನು ಮುಂದೆ 45 ವರ್ಷ ಮೇಲ್ಪಟ್ಟವರು ಕೂಡ ಆನ್ ಲೈನ್ ಮೂಲಕವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಇನ್ನೂ ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಪೋರ್ ವಾಲ್ ಅವರು ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಯೋಜನೆಯನ್ನು ನಗರಕ್ಕೆ ಮಾತ್ರವಲ್ಲ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಕ್ಸಿಜನ್ ಸಾಂದ್ರಕಗಳನ್ನು ಜನ ಬಳಕೆ ನೀಡುವ ಉದ್ದೇಶ ಇದೆ ಎಂದರು.

ಗಿವ್ ಇಂಡಿಯಾದ ಸರ್ಕಾರದ ಜೊತೆಗಿನ ಪಾಲುದಾರಿಕೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್ ಅವರು ಮಾತನಾಡಿ, ಸರ್ಕಾರ ಮತ್ತು ಓಲಾ ಜೊತೆಗೆ ಗೀವ್ ಇಂಡಿಯಾ ಸೇರಿ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಮೊದಲ ಹಂತದಲ್ಲಿ 500 ಸಾಂದ್ರಕ ಕೊಡುತ್ತಿದ್ದು, ಮತ್ತೆ ಅಗತ್ಯ ನೋಡಿಕೊಂಡು ಇನ್ನೂ ಹೆಚ್ವು ಸರಬರಾಜು ಮಾಡಲಾಗುವುದು ಎಂದರು.