ಚಂಡೀಗಢ : ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಲಾಗಿದೆ. ಸಂಪುಟದಿಂದ ವಜಾಗೊಳಿಸುತ್ತಿದ್ದಂತೆ ಪಂಜಾಬ್ ಪೊಲೀಸರು ಸಚಿವರನ್ನು ಬಂಧಿಸಿದ್ದಾರೆ.
ತಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ವಿಜಯ್ ಸಿಂಗ್ಲಾ ಶೇ.1ರಷ್ಟು ಕಮಿಷನ್ ಕೇಳಿದ್ದರು. ಈ ಕುರಿತಾಗಿ ಸಿಎಂ ಭಗವಂತ್ ಮಾನ್ ಅವರಿಗೆ ದೂರು ಬಂದಿತ್ತು. ಅಲ್ಲದೇ, ಬಲವಾದ ಸಾಕ್ಷ್ಯ ಕೂಡ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ.
ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಂಪುಟ ಸಚಿವರ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿ. ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2015 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ಸಂಪುಟದ ಸಚಿವರೊಬ್ಬರನ್ನು ವಜಾಗೊಳಿಸಿದ್ದರು.
ಶೇಕಡಾ 1ರಷ್ಟು ಕೂಡ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಮಾನ್ ವೀಡಿಯೋದಲ್ಲಿ ಸಂದೇಶ ರವಾನಿಸಿದ್ದಾರೆ. ಜನರು ಸಾಕಷ್ಟು ಭರವಸೆಯೊಂದಿಗೆ ಎಎಪಿಗೆ ಮತ ಹಾಕಿದ್ದಾರೆ. ನಾವು ಅದನ್ನು ಉಳಿಸಿಕೊಳ್ಳಬೇಕು. ಭಾರತ ಮಾತೆಗೆ ಅರವಿಂದ್ ಕೇಜ್ರಿವಾಲ್ ಅವರಂತಹ ಮಗ ಮತ್ತು ಭಗವಂತ್ ಮಾನ್ ಅವರಂತಹ ಸೈನಿಕ ಇರುವವರೆಗೂ ಭ್ರಷ್ಟಾಚಾರದ ವಿರುದ್ಧದ ಮಹಾಯುದ್ಧ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.










