ಹಾವೇರಿ : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದು ಸಿದ್ದರಾಮಯ್ಯ ಅವರು ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಹಿರೆಕೆರೂರಿನ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನರ್ಹ ಶಾಸಕರು ಹಣಕ್ಕೆ ಮಾರಾಟವಾಗಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಯಿಸಿದ್ದು, ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ಗೆ ಬರುವಾಗ ನೀವು ಎಷ್ಟು ದುಡ್ಡಿಗೆ ಮಾರಾಟ ಆಗಿದ್ದು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದು ಸಿದ್ದರಾಮಯ್ಯ. ಅವರು ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದರು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಉಚ್ಛಾಟನೆ ಮಾಡಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಬೇಕಿತ್ತು. ಕಾಂಗ್ರೆಸ್ ಸೇರಬೇಕೆನ್ನುವ ಉದ್ದೇಶದಿಂದ ದೇವೇಗೌಡ ಅವರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದಾರೆ. ಅನರ್ಹ ಶಾಸಕರು ಜನರ ಚಪ್ಪಾಳೆ, ಸಿಳ್ಳೆಗಳಿಗೆ ಕುರಿ, ಕೋಳಿ ರೀತಿ ಮಾರಾಟ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ಗೆ ಸೇರಲು ದೆಹಲಿಯಿಂದ ದುಡ್ಡು ಬಂದಿತ್ತಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಪೊಲೀಸ್ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಯವರ ಕ್ಷಮೆ ಕೇಳಬೇಕು. ಪೊಲೀಸ್ ಇಲಾಖೆಯನ್ನು ಇಷ್ಟು ಹಗುರವಾಗಿ ಮಾತನಾಡಬೇಡಿ. ನಿಮ್ಮನ್ನು ರಕ್ಷಣೆ ಮಾಡುವಂತಹ ಕೆಲಸ ಕೆಲವು ಪೊಲೀಸರು ಮಾಡುತ್ತಿದ್ದಾರೆ. ಎಲುಬಿಲ್ಲದೆ ನಾಲಿಗೆಯಲ್ಲಿ ಏನೇನೊ ಮಾತನಾಡಬೇಡಿ. ಪೊಲೀಸರ ಇಲಾಖೆಯವರಲ್ಲಿ ಕ್ಷಮೆ ಕೇಳದಿದ್ದರೆ ಪೊಲೀಸರು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದರು.










