ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ 24 ಗಂಟೆಗಳ ಅಹೋರಾತ್ರಿ ಧರಣಿ ಮುಕ್ತಾಯಗೊಂಡಿದೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಧರಣಿಯನ್ನು ಮುಕ್ತಾಯಗೊಳಿಸಿದ್ದು, ಈಶ್ವರಪ್ಪ ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಇದು ರಾಜಕೀಯಕ್ಕೋಸ್ಕರವಲ್ಲ. ಸಂತೋಷ್ ಕುಟುಂಬಕ್ಕೆ ನ್ಯಾಯ, ಪರಿಹಾರ ಸಿಗಬೇಕು. ನಾವು ನಿನ್ನೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾಗಿದ್ದೆವು. ಆದರೆ, ಮಾರ್ಗಮಧ್ಯೆ ನಮ್ಮನ್ನು ತಡೆಯಲಾಯಿತು. ಹೈಗ್ರೌಂಡ್ಸ್ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಹಲವು ಕಾರ್ಯಕರ್ತರನ್ನು ಬೇರೆಡೆ ಕರೆದೊಯ್ದರು. ಕೆಲ ಹೊತ್ತಿನ ನಂತರ ನಮ್ಮನ್ನು ಬಿಡುಗಡೆಗೊಳಿಸಿದರು. ಅಲ್ಲಿಂದ ಹೊರ ಬಂದ ನಂತರ ನಾವು 24 ಗಂಟೆ ವಿಧಾನಸೌಧದಲ್ಲಿ ಧರಣಿ ನಡೆಸುವ ತೀರ್ಮಾನ ಕೈಗೊಂಡು, ಧರಣಿ ನಡೆಸಿದ್ದೇವೆ ಎಂದರು.
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಾಗಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಎಫ್ಐಆರ್ ನಲ್ಲಿ ಈ ವಿಚಾರವನ್ನು ಕೈಬಿಡಲಾಗಿದೆ. ಭ್ರಷ್ಟಾಚಾರ ವಿಷಯದೊಂದಿಗೆ ಪ್ರಕರಣ ದಾಖಲಾಗಬೇಕು ಎಂಬುದು ಕಾಂಗ್ರೆಸ್ ಒತ್ತಾಯವಾಗಿದೆ. ಅಲ್ಲದೇ, ಸಂತೋಷ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಬಿಎ ಪದವೀಧರೆಯಾಗಿರುವ ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.










