ಅಹಮದಾಬಾದ್ : 2002ರ ಗುಜರಾತ್ ಕೋಮು ಸಂಘರ್ಷದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮದ ಬಗ್ಗೆ ಸಂತ್ರಸ್ತೆ ಬಿಲ್ಕಿಸ್ ಬಾನೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 20 ವರ್ಷಗಳ ಹಿಂದೆ ನಡೆದ ಕ್ರೂರ ಘಟನೆ ನನ್ನನ್ನು ಇನ್ನೂ ಹಿಂಸಿಸುತ್ತಿದೆ. ಕುಟುಂಬ ಕಳೆದುಕೊಂಡ ಆಘಾತದಿಂದ ನಾನು ತತ್ತರಿಸಿದ್ದೇನೆ. ನನ್ನ ಮೇಲೆ ಕ್ರೌರ್ಯ ಮೆರೆದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಆಘಾತ ತಂದಿದೆ ಎಂದು ಹೇಳಿದರು.
ಯಾವುದೇ ಮಹಿಳೆಗೆ ಸಿಕ್ಕಿದ್ದ ನ್ಯಾಯ ಹೀಗೆ ಅಂತ್ಯವಾಗುವುದು ಸಾಧ್ಯವೇ? ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯಗಳನ್ನು ನಾನು ನಂಬಿದ್ದೆ, ನಮ್ಮ ವ್ಯವಸ್ಥೆಯನ್ನು ನಂಬಿದ್ದೆ, ನನಗೆ ಆಗಿದ್ದ ಆಘಾತದಿಂದ ನಿಧಾನವಾಗಿ ಹೊರಗೆ ಬರುತ್ತಿದ್ದೆ. ನನ್ನ ದುಃಖ, ನನ್ನ ಹೋರಾಟ, ನಾನು ನ್ಯಾಯಾಲಯಗಳಿಗೆ ಅಲೆದದ್ದು ಕೇವಲ ನನಗಾಗಿ ಅಲ್ಲ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಹೋರಾಡುತ್ತಿರುವ ಎಲ್ಲ ಮಹಿಳೆಯರ ಪರವಾಗಿ ಹೋರಾಡುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ ಈಗ ಏನಾಯಿತು, ಇದೀಗ ಅಪರಾಧಿಗಳು ಬಿಡುಗಡೆ ಹೊಂದಿರುವುದು ನನ್ನಲ್ಲಿ ಮತ್ತೆ ಆತಂಕವನ್ನು ಉಂಟು ಮಾಡಿದೆ. ಕಾನೂನಿನ ಮೇಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿದೆ ಎಂದು ಹೇಳಿದರು.
ಇಷ್ಟು ದೊಡ್ಡ ಮಟ್ಟದ ಅನ್ಯಾಯದ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾರೂ ನನ್ನ ಸುರಕ್ಷತೆ ಬಗ್ಗೆ ವಿಚಾರಿಸಲಿಲ್ಲ. ಗುಜರಾತ್ ಸರ್ಕಾರಕ್ಕೆ ನನ್ನ ವಿನಂತಿ ಇಷ್ಟೇ. ಯಾವುದೇ ಭಯ ಇಲ್ಲದೇ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಮರಳಿ ಕೊಡಿ ಎಂದು ಅವರು ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ಹೊರಹಾಕಿದರು.
2002 ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಅವರ ಕುಟುಂಬದ 7 ಮಂದಿಯ ಕೊಲೆಯಾಗಿತ್ತು. ಆಗ ಅವರಿಗೆ ಕೇವಲ 21 ವರ್ಷ ವಯಸ್ಸು. ಮುಂಬೈನ ಸಿಬಿಐ ಕೋರ್ಟ್ ಜನವರಿ 21, 2008ರಂದು ಈ ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಆಗಸ್ಟ್ 15 ರಂದು ದೀರ್ಘಾವಧಿಯಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ಸಭ್ಯತೆ, ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಲಾಗಿದೆ. ಇದರಲ್ಲಿ ಗುಜರಾತ್ ಗಲಭೆಯ ಸಂತ್ರಸ್ತೆ ಬಿಲ್ಕಿಸ್ ಬಾನೊ ಅವರ ಮೇಲೆ ಅತ್ಯಾಚಾರ ಮಾಡಿದವರೂ ಇದ್ದು ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.










