ಕೊಟ್ಟಿಗೆಹಾರ : ಕುಟುಂಬ ನಿರ್ವಹಣೆಯನ್ನು ಅತ್ಯಂತ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯಾದ ಡಾ.ಸುಧಾರಾಣಿ ಎನ್ ಹೇಳಿದರು.
ಮೂಡಿಗೆರೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಇಂದು ಬಣಕಲ್ನ ಚರ್ಚ್ ಹಾಲ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮಹಿಳೆ ಕುಟುಂಬವನ್ನು ನಿರ್ವಹಿಸಿದಷ್ಟೆ ಚಾತುರ್ಯದಿಂದ ಸಮಾಜವನ್ನು ಮುನ್ನಡೆಸಬಲ್ಲಳು. ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಅಭಿವೃದ್ದಿಗೆ ತನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕಿದೆ ಎಂದರು.
ಜೆಸಿಐ ಬಣಕಲ್ನ ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಜವಾಬ್ದಾರಿಗಳ ಅನುಗುಣವಾಗಿ ಕುಟುಂಬದಲ್ಲಿ ಹಲವು ವಿಧದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮಹಿಳೆ ಕುಟುಂಬದ ಏಳಿಗೆಗೆ ಆಧಾರಸ್ತಂಭವಾಗಿದ್ದಾಳೆ. ಮಹಿಳೆಯರಲ್ಲಿ ಉಳಿತಾಯ ಮನೋಭಾವ ಹೆಚ್ಚಾಗಿದ್ದು ಇದರಿಂದಾಗಿ ಆರ್ಥಿಕ ಸಭಲತೆ ಹೊಂದಲು ಸಾಧ್ಯವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ಮಾತನಾಡಿ, ಇಂದಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಸಾಲ ಸೌಲಭ್ಯಗಳಿಂದ ಆರ್ಥಿಕ ಸುಧಾರಣೆಗೆ ವಿವಿಧ ಕೌಶಲ್ಯಗಳನ್ನು ಬಳಸಿಕೊಂಡಿದ್ದಾರೆ. ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಮಹಿಳೆಯರ ಸರ್ವಾಗೀಂಣ ಅಭಿವೃದ್ದಿಗೆ ಪೂರಕವಾಗಿದೆ ಎಂದರು. ಈ ಸಂದರ್ಭದಲ್ಲಿ ಎಂಜಿಎಂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಾಂಭವಿ ಸಿ.ಎಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಣಕಲ್ ಗ್ರಾ.ಪಂ ಅಧ್ಯಕ್ಷೆ ಬಿ.ಬಿ ಲೀಲಾವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅನುಷಾ ಶೆಟ್ಟಿ, ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಿವಾನಂದ್, ಒಕ್ಕೂಟದ ಅಧ್ಯಕ್ಷರಾದ ಆತಿಕಾಭಾನು, ಮಂಜುನಾಥ್, ಸಂಯೋಜಕ ರವಿ, ಹಾಗೂ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಇದ್ದರು.










