ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ ; ಮತ್ತೆ ಮೂವರು ಅರೆಸ್ಟ್…

58
firstsuddi

ಬೆಳಗಾವಿ : ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಪರೀಕ್ಷಾರ್ಥಿಗಳ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ. ಬಂಧಿತರು ಗದಗದಿಂದ ಬಂದಿದ್ದ ಪ್ರಶ್ನೆಪತ್ರಿಕೆಗೆ ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಉತ್ತರವನ್ನು ಬಿಡಿಸಿದ್ದರು ಎಂದು ತಿಳಿದುಬಂದಿದೆ.

ಕಿಂಗ್ ಪಿನ್ ಸಂಜು ಭಂಡಾರಿ ಬಳಿ ಡಿವೈಸ್ ಪಡೆದು ಪರೀಕ್ಷಾರ್ಥಿಗಳ ಸಂಬಂಧಿಕರಿಗೆ ಅತಿಥಿ ಉಪನ್ಯಾಸಕ ನೀಡಿದ್ದರು. ಆರು ಲಕ್ಷ ರೂಪಾಯಿಗೆ ಡೀಲ್ ಫೈನಲ್ ಮಾಡಿ ಬ್ಲ್ಯೂಟೂಥ್ ಡಿವೈಸ್ ಅನ್ನು ಪರೀಕ್ಷಾರ್ಥಿಗಳ ಸಂಬಂಧಿಕರು ಪಡೆದುಕೊಂಡಿದ್ದರು ಎನ್ನಲಾಗ್ತಿದೆ.

ಗೋಕಾಕ್, ಗದಗದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದರು. ಆ.7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್ ನಲ್ಲಿ ಸ್ಮಾರ್ಟ್​ವಾಚ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು. ಈ ಸಂಬಂಧ ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪರೀಕ್ಷಾರ್ಥಿ ಸಿದ್ದಪ್ಪ ಮದೀಹಳ್ಳಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಸಿದ್ದಪ್ಪ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಸದ್ಯ ಎಸ್ ಪಿ ಡಾ ಸಂಜೀವ ಪಾಟೀಲ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳಿಂದ ತನಿಖೆ ಮುಂದುವರೆದಿದೆ.