ನವದೆಹಲಿ : ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
2002ರಲ್ಲಿ ಗುಜರಾತ್ ನ ಗೋಧ್ರಾ ಹಿಂಸಾಚಾರದ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಕೊಂದ ಪ್ರಕರಣದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಸ್ವಾತಂತ್ರ್ಯ ದಿನಾಚರಣೆ(ಆಗಸ್ಟ್ 15) ಸಂದರ್ಭದಲ್ಲಿ ಅವರನ್ನು ಸನ್ನಡತೆ ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ಸರ್ಕಾರದ ಈ ನಡೆ ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ಅಲ್ಲದೇ, ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ನ್ಯಾಯವಾದಿ ಅಪರ್ಣಾ ಭಟ್ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಸೇರಿದಂತೆ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಕಾರ್ಯಕರ್ತೆ ರೂಪ ರೇಖಾ ರಾಣಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ಆರಂಭಿಸಿದೆ. ಸರ್ಕಾರವು ಅಪರಾಧಿಗಳಿಗೆ ಕ್ಷಮಾಪಣೆ ನೀಡಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆಯೇ ಹೊರತು ಸುಪ್ರೀಂಕೋರ್ಟ್ ಆದೇಶವನ್ನಲ್ಲ. ಯಾವ ತತ್ವಗಳ ಆಧಾರದ ಮೇಲೆ ಕ್ಷಮಾಪಣೆ ನೀಡಲಾಗಿದೆ ಎಂದು ಪ್ರಶ್ನಿಸುತ್ತಿದ್ದೇವೆ ಎಂದು ಕಪಿಲ್ ಸಿಬಲ್ ಪೀಠದ ಎದುರು ವಾದ ಮಂಡಿಸಿದರು. ಸುಪ್ರೀಂಕೋರ್ಟ್ ಪ್ರಕರಣವನ್ನು ಎರಡು ವಾರದ ಬಳಿಕ ವಿಚಾರಣೆಗೆ ನಿಗದಿಪಡಿಸಿದೆ.










