ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ವಿರುದ್ಧ ಮಾ.28 ರಿಂದ ಎರಡು ದಿನಗಳ ಕಾಲ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲು ನಗರದ ಎಐಟಿಯುಸಿ ಕಛೇರಿಯಲ್ಲಿ ಇಂದು ನಡೆದ ವಿವಿಧ ಕಾರ್ಮಿಕ ಮತ್ತು ರೈತ ಸಂಘಟನೆಗಳ ಸಭೆ ನಿರ್ಣಯಿಸಿದೆ.
ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರದ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ “ಭಾರತ ಉಳಿಸಿ ಜನರನ್ನು ರಕ್ಷಿಸಿ” ಘೋಷಣೆಯಡಿ 28 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 29 ರಂದು ನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಮಾ.29 ರಂದು ನಗರದ ಸಂತೆ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಆಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ನಿರ್ಣಯಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಸಂಚಾಲಕ ಬಿ.ಅಮ್ಜದ್ ಕೇಂದ್ರ ಸರ್ಕಾರ ಕಾರ್ಮಿಕರು ಮತ್ತು ರೈತರ ದಮನ ನೀತಿ ಅನುಸರಿಸುತ್ತಿದೆ, ಅದನ್ನು ವಿರೋಧಿಸಿ ಅಖಿಲ ಭಾರತ ಮಟ್ಟದಲ್ಲಿ 26 ಬಾರಿ ಪ್ರತಿಭಟನೆ ಮತ್ತು ಹಲವು ರೀತಿಯ ಹೋರಾಟಗಳು ಅನೇಕ ಬಾರಿ ನಡೆದಿದ್ದರೂ ಕೇಂದ್ರ ಸರ್ಕಾರ ಮಾತ್ರ ದುಡಿಯುವ ವರ್ಗಕ್ಕೆ ಸ್ಪಂದಿಸದೇ ಅವರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ 10 ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಕೇಂದ್ರದ ವಿರುದ್ದ ದೇಶಾದ್ಯಂತ ಮಾ.28 ಮತ್ತು 29 ರಂದು ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಣಯಿಸಿದ್ದು, ಜಿಲ್ಲೆಯಲ್ಲೂ ಅದಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ವಿವಿಧ ಕಾರ್ಮಿಕ ಮತ್ತು ರೈತ ಸಂಘಟನೆಗಳ ಮುಖಂಡರು ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿಯಾಗಿದ್ದು, ಬಂಡವಾಳ ಶಾಹಿಗಳ ಕಾರ್ಪೋರೇಟ್‍ಗಳ ಪರವಾಗಿದೆ, ದುಡಿಯುವ ವರ್ಗದ ಜನರ ಬದುಕಿಗೆ ಮಾರಕವಾದ ನೀತಿಗಳ ಜಾರಿಗೆ ಹವಣಿಸುತ್ತಿದೆ ಎಂದು ಆರೋಪಿಸಿದರು.
ಪ್ಲಾಂಟೇಷನ್ ಕಾರ್ಮಿಕರಿಗೆ ಮಾಸಿಕವಾಗಿ ಕನಿಷ್ಠ ಇಪ್ಪತೊಂದು ಸಾವಿರ ರೂ ವೇತನ ನಿಗಧಿಗೊಳಿಸಬೇಕು, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಿ ವಿದ್ಯುಚ್ಚಕ್ತಿ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕು, ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು, ಎಲ್ಲಾ ವಲಯಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಬಿಸಿಯೂಟ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ಕೀಂ ವರ್ಕರ್‍ಗಳಿಗೆ ಶಾಸನ ಬದ್ದ ಕನಿಷ್ಠ ವೇತನ ನಿಗಧಿಪಡಿಸಬೇಕು ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸಬೇಕು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರೇಣುಕಾರಾಧ್ಯ, ಪ್ಲಾಂಟೇಷನ್ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಐಎನ್‍ಟಿಯುಸಿ ಮುಖಂಡರಾದ ರಾಮಚಂದ್ರ ಒಡೆಯರ್, ಗೋವಿಂದನ್, ಟಿಯುಸಿಐನ ಎಸ್.ಶೇಖರ್, ಬ್ಯಾಂಕ್ ಸಂಘಟನೆಯ ಬಸವರಾಜ್, ಅಂಚೆ ನೌಕರರ ಸಂಘಟನೆಯ ಲೋಹಿತ್, ಪ್ರಗತಿಪರ ಕಾರ್ಮಿಕ ಸಂಘಟನೆಯ ಸುರೇಶ್, ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಮಂಜೇಗೌಡ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯಕುಮಾರ್, ಅಂಗನವಾಡಿ ಸಂಘಟನೆಯ ಪಾರ್ವತಿ, ಲತಾ, ಶೈಲಾ, ಉಷಾ, ಬಿಸಿಯೂಟ ಸಂಘಟನೆಯ ಇಂದುಮತಿ, ಪ್ಲಾಂಟೇಷನ್ ಸಂಘಟನೆಯ ಎ.ಜಯಕುಮಾರ್ ಸಭೆಯಲ್ಲಿ ಪಾಲೊಂಡಿದ್ದರು.










