ಕೊಟ್ಟಿಗೆಹಾರ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ ಅವರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ.

2

ಬೆಂಗಳೂರು: ಗ್ರಾಮೀಣ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಶೈಕ್ಷಣಿಕ ಸುಧಾರಣೆಗೆ ಶ್ರಮಿಸುತ್ತಿರುವ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ನೀಡುವ ಈ ಸಾಲಿನ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿಗೆ ಕೊಟ್ಟಿಗೆಹಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭಾಗ್ಯ ಅವರು ಆಯ್ಕೆಯಾಗಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಭಾಗ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರತಿಬಿಂಬ ಟ್ರಸ್ಟ್ ಹಲವು ವರ್ಷಗಳಿಂದ ರಾಜ್ಯದ ನೂರಾರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕೊಟ್ಟಿಗೆಹಾರ ಸುತ್ತಮುತ್ತಲಿನ ಗ್ರಾಮೀಣ ಶಾಲೆಗಳಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಅನುದಾನ ನೀಡುವ ಮೂಲಕ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ.
ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್, ವಿಜ್ಞಾನ ಪ್ರಯೋಗಾಲಯದ ಉಪಕರಣಗಳು, ಉಚಿತ ಪುಸ್ತಕಗಳು, ಬ್ಯಾಗ್‌ಗಳು ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಿವಿಧ ಶೈಕ್ಷಣಿಕ ಪರಿಕರಗಳನ್ನು ಟ್ರಸ್ಟ್ ನಿರಂತರವಾಗಿ ಒದಗಿಸುತ್ತಿದೆ.
ಐಟಿ ಕ್ಷೇತ್ರದ ಉದ್ಯೋಗಿಗಳು ಸೇರಿದಂತೆ ನೂರಾರು ಪ್ರಬುದ್ಧ ಸದಸ್ಯರನ್ನು ಒಳಗೊಂಡಿರುವ ಪ್ರತಿಬಿಂಬ ಟ್ರಸ್ಟ್ ಅನ್ನು ವಿ. ಮುರಳೀಧರ ರಾವ್ ಅವರು ಮುನ್ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಸೌಲಭ್ಯಗಳನ್ನು ತಲುಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.