ಮೂಡಿಗೆರೆ : ಮಹಿಳಾ ರೈತ ಉತ್ಪಾದಕ ಸಂಸ್ಥೆಗೆ ಒಂದು ಕೋಟಿ ವಹಿವಾಟಿನ ಗುರಿ

4

ಮೂಡಿಗೆರೆ: ಇತ್ತೀಚೆಗೆ ಎಪಿಎಂಸಿ ಕಚೇರಿಯಲ್ಲಿ , ಟೆರಾ ಇಕೋಪ್ರೀನರ್ಸ್ ಮಾಲೀಕ ಅಶ್ವಿನ್ ಕುಮಾರ್ ಮತ್ತು ಕಾಫಿ ಬೋರ್ಡಿನ ಹಿರಿಯ ವಿಸ್ತರಣಾ ಅಧಿಕಾರಿಗಳಾದ ತಾರಾರವರ ಜೊತೆ ನಡೆದ ಸಂವಾದದಲ್ಲಿ ಮಹಿಳಾ ಕಾಫಿ ಬೆಳೆಗಾರರನ್ನು ಒಗ್ಗೂಡಿಸಿ, ಕಾಫಿ ಬೇಸಾಯ, ಸಂಸ್ಕರಣೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂಡಿಗೆರೆ ಮಹಿಳಾ ರೈತ ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು .

ಸಂಸ್ಥೆಯಲ್ಲಿ ಪ್ರಸ್ತುತ 300 ಮಹಿಳಾ ಸದಸ್ಯರಿದ್ದು, ಅವರಲ್ಲಿ 10 ಮಂದಿಯನ್ನು ನಿರ್ದೇಶಕರಾಗಿ ನಾಮನಿರ್ದೇಶನ ಮಾಡಲಾಗಿದೆ. ಕಾಫಿ ಬೆಳೆಯುವ ಕುಟುಂಬಗಳ ಮಹಿಳೆಯರು ಕಾಫಿ ಬೇಸಾಯ, ಸಂಸ್ಕರಣೆ ಹಾಗೂ ವ್ಯಾಪಾರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ತೋಟಗಳ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ದೃಢ ನಂಬಿಕೆಯಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಅಧ್ಯಕ್ಷೆ ಶೋಭಾ ನಾರಾಯಣ್ ತಿಳಿಸಿದರು.

*ಟೆರಾ ಇಕೋಪ್ರೀನರ್ಸ್ ಜೊತೆ ಪಾಲುದಾರಿಕೆ*

ಬೆಂಗಳೂರಿನ ಟೆರಾ ಇಕೋಪ್ರೀನರ್ಸ್ ಎಲ್‌ಎಲ್‌ಪಿ ಸಂಸ್ಥೆಯೊಂದಿಗೆ ಮೂಡಿಗೆರೆ ಮಹಿಳಾ ರೈತ ಉತ್ಪಾದಕ ಸಂಸ್ಥೆ ಪಾಲುದಾರಿಕೆ ಮಾಡಿಕೊಂಡಿದೆ. ಬುಡಕಟ್ಟು, ಅತಿಸಣ್ಣ ಹಾಗೂ ಮಹಿಳಾ ಕಾಫಿ ಬೆಳೆಗಾರರನ್ನು ಬೆಂಬಲಿಸುವ ಉದ್ದೇಶದಿಂದ ‘ಟ್ರಾನ್ಸ್‌ಫಾರ್ಮ್’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇನ್ನೂ
ಈ ಯೋಜನೆಯ ಮೂಲಕ ಕಾಫಿ ಉತ್ಪಾದಕತೆ ಹಾಗೂ ಗುಣಮಟ್ಟ ಸುಧಾರಣೆಗೆ ಅಗತ್ಯವಾದ ತರಬೇತಿ ನೀಡಲಾಗುತ್ತಿದೆ. ಕಾಫಿ ಕೃಷಿ, ಸಂಸ್ಕರಣೆ, ರೈತ ಉತ್ಪಾದಕ ಸಂಸ್ಥೆ (FPO) ನಿರ್ವಹಣೆ ಹಾಗೂ ವ್ಯಾಪಾರ ಚಟುವಟಿಕೆಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದಲ್ಲದೆ, ಮಾರ್ಚ್ 2026ರಲ್ಲಿ ಸಂಸ್ಥೆಯ ವತಿಯಿಂದ ಖರೀದಿದಾರರು ಮತ್ತು ಮಾರಾಟಗಾರರ ಸಭೆಯನ್ನು ಆಯೋಜಿಸಲಾಗಿತ್ತು. ಪ್ರಮುಖ ಕಾಫಿ ರಫ್ತು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಲ್ಕು ರೈತ ಒಕ್ಕೂಟಗಳೊಂದಿಗೆ ಸಂವಾದ ನಡೆಸಿ ಕಾಫಿ ಸಂಗ್ರಹಣೆ ಮತ್ತು ವ್ಯಾಪಾರದ ವಿವಿಧ ಅವಕಾಶಗಳ ಕುರಿತು ಚರ್ಚಿಸಲಾಯಿತು

ಟ್ರಾನ್ಸ್‌ಫಾರ್ಮ್ ಯೋಜನೆಯ ಬೆಂಬಲದೊಂದಿಗೆ ಕಾಫಿ ಮತ್ತು ಕಾಳುಮೆಣಸು ಕೃಷಿಗೆ ಅಗತ್ಯವಿರುವ ಹೆಚ್ಚುವರಿ ಕೃಷಿ ಪರಿಕರಗಳನ್ನು ಸದಸ್ಯರಿಗೆ ಪೂರೈಸಲು ಸಾಧ್ಯವಾಗಿದೆ. ಈ ಪಾಲುದಾರಿಕೆಯು ಸಂಸ್ಥೆಯ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವುದರ ಜೊತೆಗೆ ಬಲವಾದ ಆಂತರಿಕ ಕಾರ್ಯಾಚರಣಾ ವ್ಯವಸ್ಥೆಯನ್ನು ರೂಪಿಸಲು ಸಹಕಾರಿಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಕಿರಣ್ ತಿಳಿಸಿದರು.

*ಒಂದು ಕೋಟಿ ವಹಿವಾಟಿನ ಗುರಿ*

2026-27ನೇ ಸಾಲಿನಲ್ಲಿ ಕನಿಷ್ಠ ಒಂದು ಕೋಟಿ ಏಕೀಕೃತ ಆದಾಯ ಸಾಧಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ಮಹಿಳಾ ಕಾಫಿ ಬೆಳೆಗಾರರನ್ನು ಆರ್ಥಿಕವಾಗಿ ಸಬಲಗೊಳಿಸುವುದರ ಜೊತೆಗೆ, ಅವರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ಮಹಿಳಾ ರೈತ ಉತ್ಪಾದಕ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂಬುದು ಎಲ್ಲಾ ನಿರ್ದೇಶಕರ ಒಕ್ಕೊರಲಿನ ಧ್ವನಿ ಯಾಗಿದೆ. ಈ ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸುಚಿತ ದಿನೇಶ್, ಸುಜಾತ ಪ್ರಸನ್ನ, ಮಧುರಾ ಜಯಂತ್, ಕೌಶಲ್ಯ ಅಶೋಕ್ , ಸ್ವರೂಪ ಪ್ರಶಾಂತ್, ವನ ಜಗದೀಶ್ , ದೀಪ್ತಿ ಸುಬ್ರಾಯ ಹಾಗೂ ಮೂಡಿಗೆರೆ ಕಾಫಿ ಬೋರ್ಡಿನ ಅಧಿಕಾರಿಗಳು ಹಾಜರಿದ್ದರು