ಕೊನೆಯುಸಿರಿನವರೆಗೂ ಸೇವೆ ಮಾಡೋದು ಅಷ್ಟೇ ಅಲ್ಲ, ಜೀವನದ ಕೊನೆಯ ಉಸಿರು ಹೋದ ಮೇಲೂ ಇಲ್ಲೇ ಮಣ್ಣಾಗುತ್ತೇನೆ: ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಭಾವುಕ…

32
firstsuddi

ಹಾವೇರಿ: “ನನ್ನ ರಾಜಕಾರಣದ ಜೀವನದಲ್ಲಿ ಹಲವು ಕ್ಷೇತ್ರಗಳನ್ನು ಸುತ್ತಿದ್ದೇನೆ. ಆದರೆ ಹಾವೇರಿ ಜಿಲ್ಲೆಯ ಶಿಗ್ಗಾಂವ್, ಸವಣೂರಿನಂತಹ ಜನರು ನನಗೆ ಎಲ್ಲೂ ಸಿಗಲ್ಲ” ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಶಿಗ್ಗಾಂವ್​ನಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ವೇದಿಕೆ ಮೇಲೆ ಕುಳಿತಿರುವವರು ನಮ್ಮ ನಾಯಕರು. ವೇದಿಕೆ ಮುಂಭಾಗ ಕುಳಿತಿರುವವರು ನಾಯಕರನ್ನು ಸೃಷ್ಟಿಸುವ ಜನ, ನಮ್ಮ ಮಹಾನಾಯಕರು. ಲೋಕಸಭೆ ಟಿಕೆಟ್ ಘೋಷಣೆಯ ಬಳಿಕ ಕ್ಷೇತ್ರದ ಜನರು ನೋವಿನಿಂದ ಕಣ್ಣೀರು ಹಾಕಿದ್ದರು. ಅವರನ್ನು ಕಂಡು ನಾನು ಅಂದು ಕಣ್ಣೀರು ಹಾಕಿದ್ದೆ. ಶಿಗ್ಗಾಂವ್ ಕ್ಷೇತ್ರದ ಜನರ ಬಳಿ ರಾಜಕೀಯ ಮೀರಿ ನನ್ನ ಸಂಬಂಧವಿದೆ. ಚುನಾವಣೆ, ಗೆದ್ದ ಪ್ರತಿನಿಧಿ ಯಾವ ರೀತಿ ವರ್ತಿಸಬೇಕು? ಜನ ಹೇಗಿರಬೇಕು ಅನ್ನೋದನ್ನು ತೋರಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಕ್ಷೇತ್ರದ ಜನರ ಈ ಪ್ರೀತಿ, ವಿಶ್ವಾಸ ಹೇಗೆ ಬೆಳೆಯಿತು ಅನ್ನೋದನ್ನು ಯೋಚಿಸಿದರೆ ನನಗೆ ಆಶ್ಚರ್ಯವಾಗುತ್ತದೆ. ಅಧಿಕಾರ ಹುಡುಕಿಕೊಂಡು ಹೋದವನು ನಾನಲ್ಲ. ಈ ಕ್ಷೇತ್ರಕ್ಕಾಗಿ ಹಲವರು ಆಕಾಂಕ್ಷಿಗಳಿದ್ದರು. ದೆಹಲಿಗೆ ಹೋದಾಗ ನಮ್ಮ ಹೈಕಮಾಂಡ್ ನಾಯಕರು ಮಾತನಾಡಿ, ಚುನಾವಣೆಗೆ ನಿಲ್ಲುವಂತೆ ಹೇಳಿದರು. ಆದರೆ ನಾನು ಅಂದು ಈಶ್ವರಪ್ಪರ ಮಗನಿಗೆ ಟಿಕೆಟ್ ಕೂಡಿ ಅಂತ ಹೇಳಿದ್ದೆ. ಶಾಸಕ ಸ್ಥಾನ ಶಾಶ್ವತ ಅಲ್ಲ. ಸಹೋದರನ ಸ್ಥಾನ ಶಾಶ್ವತ” ಎಂದರು.

“ಜೀವನದ ಕೊನೆಯ ಉಸಿರು ಇರುವವರೆಗೂ ನಾನು ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಅಧಿಕಾರ ಇರದೇ ಇದ್ದರೂ ನಿಮ್ಮ ಸೇವೆ ಮಾಡುತ್ತೇನೆ. ಉಸಿರು ಇರುವವರೆಗೂ ಸೇವೆ ಮಾಡೋದು ಅಷ್ಟೇ ಅಲ್ಲ, ಜೀವನದ ಕೊನೆಯ ಉಸಿರು ಹೋದ ಮೇಲೂ ಇಲ್ಲೇ ಮಣ್ಣಾಗುತ್ತೇನೆ” ಎಂದು ಬೊಮ್ಮಾಯಿ ಕಣ್ಣೀರು ಹಾಕಿದರು.