ಬಳ್ಳಾರಿ : ರಾಜ್ಯದಲ್ಲಿ ಅಮಾನವೀಯ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು, ಅದಕ್ಕೆ ಪೂರಕವೆಂಬಂತೆ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಸಿಬ್ಬಂದಿಗಳು ಸೈಕಲ್ ಮೇಲೆ ಸಾಗಿಸಿ ಅಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರ ಮಾಡಲು ನಗರದ ಬಸ್ ಡಿಪೋ ಬಳಿಯ ಕಬರಸ್ತಾನಕ್ಕೆ ತಂದಿದ್ದರು. ಆದರೆ ಆ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಸೈಕಲ್ ಮೇಲೆ ಮಲಗಿಸಿ ಬೇರೆಡೆಗೆ ಸಾಗಿಸಿದ್ದು, ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಶವವನ್ನು ಆಂಬುಲೆನ್ಸ್ನಲ್ಲಿ ಸಾಗಿಸದೇ ಸೈಕಲ್ನಲ್ಲಿ ಸಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.










