ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ನಿಯಂತ್ರಣಕ್ಕೆ ಸನ್ನದ್ಧರಾಗಿ : ಕೂರ್ಮರಾವ್ ಎಂ.

58
firstsuddi

ಉಡುಪಿ : ಕೋವಿಡ್ ಸೋಂಕಿನ ರೂಪಾಂತರ ವೈರಸ್ ಓಮಿಕ್ರಾನ್ ಹರಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ ಈ ಹಿಂದೆ ಕೋವಿಡ್ ಅಲೆಗಳನ್ನು ನಿಯಂತ್ರಿಸಲು ರಚಿಸಿರುವ ಸಮಿತಿಗಳನ್ನು ಪುನಾರಾರಂಭಿಸಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ, ಜಿಲ್ಲೆಯಲ್ಲಿ ಓಮಿಕ್ರನ್ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ವರ್ಚುವಲ್ ಮೀಟಿಂಗ್ನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ವಿಶ್ವದ 11 ದೇಶಗಳಲ್ಲಿ ಹೊಸ ರೂಪಾಂತರಿ ತಳಿಯಾದ ಓಮಿಕ್ರಾನ್ ವ್ಯಾಪಕವಾಗಿ ಹರಡಿದ್ದು, ವಿದೇಶಿ ಪ್ರಯಾಣಿಕರಿಂದ ರಾಜ್ಯದಲ್ಲಿ ಸಹ ಹರಡುವ ಸಾಧ್ಯತೆಗಳಿದ್ದು, ಹೊಸ ತಳಿಯು ಹರಡುವ ವೇಗವು ಹೆಚ್ಚಿರುವ ಹಿನ್ನಲೆ, ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅವಶ್ಯವಾಗಿದೆ ಎಂದರು.

ಓಮಿಕ್ರಾನ್ ದೃಡಪಟ್ಟ ರಾಷ್ಟ್ರಗಳಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪ್ಪದೇ ಪರೀಕ್ಷೆಗೆ ಒಳಪಡಿಸಬೇಕು. ಒಂದೊಮ್ಮೆ ಅವರ ಪರೀಕ್ಷಾ ವರದಿಯು ನೆಗೆಟಿವ್ ಬಂದಲ್ಲಿ ಅವರನ್ನು 7 ದಿನಗಳ ಹೋಂ ಕ್ವಾರಂಟೈನ್ ಮಾಡಬೇಕು. ಪಾಸಿಟಿವ್ ಬಂದಲ್ಲಿ ಅವರುಗಳನ್ನು 14 ದಿನಗಳ ಕಾಲ ಸಾಂಸ್ಥಿಕ ಐಸೋಲೇಶನ್/ಆಸ್ಪತ್ರೆಗೆ ದಾಖಲಿಸಬೇಕು ಎಂದ ಅವರು, ಕಳೆದ 15 ದಿನಗಳಿಂದ ಜಿಲ್ಲೆಗೆ ವಿದೇಶದಿಂದ ಬಂದಿರುವವರ ಮಾಹಿತಿಗಳನ್ನು, ಮಂಗಳೂರು ಹಾಗೂ ಬೆಂಗಳೂರು ವಿಮಾನ ನಿಲ್ಧಾಣಗಳಿಂದ ಪಡೆದು, ಅವರುಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಜನ ಸಾಮಾನ್ಯರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು, ಕೈ ತೊಳೆಯುವುದು ಸೇರಿದಂತೆ ಕೋವಿಡ್ನ ಸರಳ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು. ತಮ್ಮ ನೆರೆ ಹೊರೆಯವರು ವಿದೇಶದಿಂದ ಬಂದಿದ್ದಲ್ಲಿ ಅವರ ಮಾಹಿತಿಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.

ಕೋವಿಡ್ ಪರೀಕ್ಷಾ ನಿರ್ವಹಣಾ ಸಮಿತಿಯು ಪ್ರತಿದಿನ ಕೋವಿಡ್ ಪರೀಕ್ಷೆಯ ಸ್ವ್ಯಾಬ್ ಸಂಗ್ರಹವನ್ನು ಅದೇ ದಿನ ಮಧ್ಯಾಹ್ನ ಹಾಗೂ ಸಂಜೆ 2 ಪಾಳಿಯಲ್ಲಿ ಟೆಸ್ಟಿಂಗ್ ಸೆಂಟರ್‌ಗಳಿಗೆ ರವಾನಿಸಿ, ಅಂದಿನ ದಿನದ ಪರೀಕ್ಷೆಯ ವರದಿಯುನ್ನು ಅಂದೇ ನೀಡುವಂತೆ ಕಾರ್ಯಪ್ರವೃತ್ತರಾಗಬೇಕು. 3 ಮತ್ತು 4 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಆ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಿಸಬೇಕು. ಒಂದೇ ಪ್ರಕರಣ ಕಂಡುಬಂದಲ್ಲಿ ಆ ಮನೆಯನ್ನು ಸೀಲ್ ಡೌನ್ ಮಾಡಬೇಕು ಎಂದು ಸೂಚನೆ ನೀಡಿದರು.