ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದ ಕೆಲವೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಸಂಜೆ ಕೊವಿಡ್ ತಜ್ಞರು, ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೇನೆ. ಸಭೆ ಬಳಿಕ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಅಲ್ಲದೇ, ರಾಜ್ಯದಲ್ಲಿ ತಡ ಮಾಡದೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಸಂಜೆ ನಾಲ್ಕು ಗಂಟೆಗೆ ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲಿದ್ದಾರೆ. ಜೊತೆಗೆ ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು, ಬೆಂಗಳೂರು ನಗರ ಡಿಸಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಸೂಚನೆ ನೀಡಿದ್ದಾರೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೂ ಕೂಡಾ ಸಭೆಗೆ ಆಹ್ವಾನಿಸಿದ್ದಾರೆ.
ಹೊಸ ಹೊಸ ರೂಪಾಂತರಿ ವೈರಸ್ ಗಳ ಹಾವಳಿ ವಿಶ್ವಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಗಟ್ಟುವ ಬಗ್ಗೆ ಹಾಗೂ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಮಾಡುವುದು.. ಹೀಗೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ.










