ಕ್ರಿಮಿನಲ್ ಕೇಸ್ ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಇಲ್ಲ : ಶೋಭಾ ಕರಂದ್ಲಾಜೆ.

69
firstsuddi

ಉಡುಪಿ : ಬಿಜೆಪಿಗೆ ಯಾರೇ ಬಂದರೂ ನಮ್ಮ ಬಾಗಿಲು ತೆರೆದಿದೆ, ಆದರೆ ಕ್ರಿಮಿನಲ್ ಕೇಸ್ ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಕೇಂದ್ರದ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ತ್ಯಜಿಸುವ ಹಲವಾರು ನಾಯಕರು ನಮ್ಮ ಸಂಪರ್ಕಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಹಲವಾರು ನಾಯಕರು ಬಿಜೆಪಿಯನ್ನು ಸೇರುತ್ತಾರೆ. ಪ್ರಧಾನಿ ನರೇಂದ್ರ ಮೋದಿಗೆ ವಿದೇಶದಲ್ಲಿ ಅಪಾರ ಗೌರವ ಸಿಗುತ್ತಿದೆ. ಮೋದಿಯವರದ್ದು ಅಭಿವೃದ್ಧಿ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವವನ್ನು ಒಪ್ಪಿ ಹಲವಾರು ಜನ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಒಳ ಜಗಳದಿಂದ ರಾಜ್ಯ ಕಾಂಗ್ರೆಸ್ ಅವನತಿಯತ್ತ ಸಾಗಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ನೇತೃತ್ವ ಇಲ್ಲ ಎಂದರು

ರಾಜ್ಯದ ಹಲವು ಕಡೆ ಗಲಭೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಘಟನೆಗಳ ಎನ್ ಐಎ ತನಿಖೆ ಆಗುತ್ತದೆ. ಈ ಘಟನೆ ಹಿಂದಿರುವ ಷಡ್ಯಂತ್ರ, ಈ ರೀತಿ ಚಟುವಟಿಕೆ ಮಾಡುವವರಿಗೆ ಯಾವ ದೇಶದ ಬೆಂಬಲ ಇದೆ? ನಮ್ಮ ದೇಶದವರ ಬೆಂಬಲ ಇದ್ದರೆ ಅದು ಯಾರು ಎಂಬ ಬಗ್ಗೆ ಎನ್ ಐಎ ತನಿಖೆ ಆಗಲಿದೆ ಎಂದರು.