ಚಂಡೀಗಢ : ಸ್ವಯಂಘೋಷಿತ ಉಗ್ರಗಾಮಿ, ಸಿಖ್ ಧರ್ಮ ಪ್ರಚಾರಕ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ್ದ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಇಂದು ಬಂಧಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅವರು ಆರಂಭಿಸಿದ “ವಾರಿಸ್ ಪಂಜಾಬ್ ದೇ” ಎಂಬ ಮೂಲಭೂತ ಸಂಘಟನೆಯನ್ನು ಅಮೃತಪಾಲ್ ಮುನ್ನಡೆಸುತ್ತಿದ್ದಾನೆ. ಏಳು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಬೆನ್ನಟ್ಟಿದ್ದು, ಜಲಂಧರ್‌ನ ಶಾಕೋಟ್ ತೆಹಸಿಲ್‌ನ ಮೆಹತ್‌ಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.
ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯವಾಗಿರುವ ತೀವ್ರಗಾಮಿ ಪ್ರತ್ಯೇಕತಾವಾದಿ ನಾಯಕ ಸಿಂಗ್ ಆಗಾಗ್ಗೆ ಶಸ್ತ್ರಸಜ್ಜಿತ ಬೆಂಬಲಿಗರ ಬೆಂಗಾವಲಿನೊಂದಿಗೆ ಕಾಣಿಸುತ್ತಿದ್ದ. ಅಮೃತಪಾಲ್ ಸಿಂಗ್ನ ಪ್ರಮುಖ ಸಹಾಯಕ, ಅಪಹರಣ ಆರೋಪಿ ಲವ್‌ಪ್ರೀತ್ ಸಿಂಗ್ ಬಂಧನದ ವಿರುದ್ಧ ಫೆಬ್ರವರಿ 23 ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಈತ ಕಾಣಿಸಿದ್ದ. .
ಈತನ ಬೆಂಬಲಿಗರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್ ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿನ ಪೊಲೀಸ್ ಠಾಣೆಗೆ ನುಗ್ಗಿ, ಲವ್‌ಪ್ರೀತ್ ಸಿಂಗ್ ನ್ನು ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನು ಪೊಲೀಸರಿಂದ ಪಡೆದಿದ್ದರು. ಅಲ್ಲಿ ನಡೆದ ಹಿಂಸಾಚಾರಕ್ಕೆ ಅವರು ಪಂಜಾಬ್ ಪೊಲೀಸರನ್ನು ದೂಷಿಸಿದ್ದರು.
ಘರ್ಷಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿ ಈ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು. ಹಿಂಸಾಚಾರಕ್ಕಾಗಿ ಅಮೃತಪಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆಯೇ ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ ಭಾಗವಾಗಿ ರಾಜ್ಯಾದ್ಯಂತ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಪಂಜಾಬ್ ನ ಪ್ರಾದೇಶಿಕ ನ್ಯಾಯ ವ್ಯಾಪ್ತಿಯಲ್ಲಿ ಎಲ್ಲ ಮೊಬೈಲ್ ಇಂಟರ್ನೆಟ್ ಸೇವೆಗಳು, ಎಲ್ಲಾ ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲಾ ಡಾಂಗಲ್ ಸೇವೆಗಳು, ಧ್ವನಿ ಕರೆ ಹೊರತುಪಡಿಸಿ ಎಲ್ಲ ಸೇವೆಗಳನ್ನು ಮಾರ್ಚ್ 18 ರಿಂದ ಮಾರ್ಚ್ 19 ರವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.