ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ…

61
firstsuddi

ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ವಾಣಿ ಜಯರಾಂ (78) ಅವರು ನಿಧನರಾಗಿದ್ದಾರೆ.

ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಹಣೆಗೆ ಗಾಯವಾಗಿದ್ದು, ಇದೊಂದು ನಿಗೂಢ ಸಾವು ಎಂದು ಬಣ್ಣಿಸಲಾಗುತ್ತಿದೆ.

ವಾಣಿ ಜಯರಾಂ ತಮಿಳುನಾಡಿನ ವೆಲ್ಲೋರ್ ನಲ್ಲಿ 1954ರ ನವೆಂಬರ್ 30ರಂದು ಜನಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದರು. ಜಯರಾಂ ಅವರನ್ನು ವಿವಾಹವಾದ ಬಳಿಕ ವಾಣಿ ಚೆನ್ನೈನಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಪತಿ ಜಯರಾಂ ಅವರ ಸಹಕಾರದೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ಭಾರತೀಯ ನಾನಾ ಭಾಷೆಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಕೀರ್ತಿ ವಾಣಿ ಜಯರಾಂ ಅವರಿಗೆ ಸಲ್ಲುತ್ತದೆ. ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಮೊನ್ನೆಯಷ್ಟೇ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ಭೂಷಣವನ್ನೂ ಘೋಷಿಸಿದೆ.