ಕಾರವಾರ: ವಿವಾಹಿತ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ದೈವ ನರ್ತಕ ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಂಬಾರಕೊಡ್ಲೆನಲ್ಲಿ ನಡೆದಿದೆ.
ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡು ಅಂಕೋಲದಲ್ಲಿರುವ ಕಾಲಭೈರವ ದೇವರ ಸನ್ನಿದಾನಕ್ಕೆ ಬಂದಿದ್ದ ಬೆಳಗಾವಿಯ ಮಹಿಳೆಗೆ ಮದುವೆಯಾಗುವುದಾಗಿ ದೈವ ನರ್ತಕ ವಾಗ್ದಾನ ಮಾಡಿದ್ದಾನೆ. ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈ ಮೇಲೆ ಅರಿಶಿಣ ಚೆಲ್ಲಿಕೊಳ್ಳುತ್ತಾ ಕಾಂತಾರ ಸ್ಟೈಲ್ ನಲ್ಲಿ ಓ… ಎಂದು ಕೂಗುತ್ತ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ ಎಂದು ನುಡಿದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಟೀಕೆಗೆ ಗ್ರಾಸವಾಗಿದೆ.
ಇನ್ನು ದೈವ ನರ್ತಕ ಪಾತ್ರಿಗೆ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಈತನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಈತ ದೇವರ ಹೆಸರಿನಲ್ಲಿ ಈ ರೀತಿ ನಟಿಸಿದ್ದಾನೆ ಎನ್ನಲಾಗುತ್ತಿದೆ.










