ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್…

175
firstsuddi

ಬೆಂಗಳೂರು : ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಸಂಗೀತ ನಿರ್ದೇಶಕರಾದ ಕೆ. ಕಲ್ಯಾಣ್ ಅವರು ಮಾಹಿತಿ ನೀಡಿದ್ದಾರೆ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆಗಸ್ಟ್ 5ರಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 8 ದಿನಗಳಿಂದ ಎಸ್‍ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈದ್ಯರು ಕೂಡಾ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ನೀಡಿದ್ದರು. ಕೊರೊನಾ ಸೋಂಕಿನಿಂದಾಗಿ ಶ್ವಾಸಕೋಶಗಳು ತೀವ್ರ ಹಾನಿಗೊಳಗಾದ ಕಾರಣ ರಕ್ತಸ್ರಾವ ಹೆಚ್ಚಾಗಿ ಎಕ್ಮೋಮೆಷಿನ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ನಿನ್ನೆ ಬೆಳಗ್ಗೆಯಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ವೆಂಟಿಲೇಟರ್ ಇಲ್ಲದೇ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಕೆ. ಕಲ್ಯಾಣ್ ಅವರು ತಿಳಿಸಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶೀಘ್ರ ಗುಣಮುಖರಾಗಲೆಂದು ವಿಶ್ವದಾಧ್ಯಂತ ಪ್ರಾರ್ಥನೆ ನಡೆಸಲಾಗಿತ್ತು. ಈಗಾ ಎಸ್‍ಪಿಬಿ ಅವರ ಕೊರೊನಾ ವರದಿ ನೆಗೆಟಿವ್ ಬಂದಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.