ಮಂಡ್ಯ : ಬಾಲಕಿಗೆ ವಿವಾಹ ಮಾಡಿ, ಬಳಿಕ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿರುವಂತಹ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಮಾರ್ಚ್ 27 ರಂದು ಎಸ್‍ಎಸ್‍ಎಲ್‍ಸಿ ಬಾಲಕಿಗೆ ಪೋಷಕರು ಮನೆಯಲ್ಲೇ ಗುಟ್ಟಾಗಿ ಕೆಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಆದರೆ 28 ರಂದು ಎಸ್‍ಎಸ್‍ಎಲ್‍ಸಿ ಇದ್ದ ಕಾರಣ ಪೋಷಕರು ಬಾಲಕಿಯ ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಕಳುಹಿಸಿದ್ದರು. ಪರೀಕ್ಷೆ ಬರೆಯಲು ಹೋದಾಗ ಬಾಲಕಿ ತನ್ನ ಸ್ನೇಹಿತೆಗೆ ಮದುವೆ ಬಗ್ಗೆ ಹೇಳಿಕೊಂಡಿದ್ದಾಳೆ. ಮಾಹಿತಿ ಬಹಿರಂಗಗೊಂಡ ಬಳಿಕ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿ ಇದ್ದು, ಬಾಲ್ಯ ವಿವಾಹ ಮಾಡಿದವರ ವಿರುದ್ಧ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲ್ಯ ವಿವಾಹ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 25 ರಂದು ಬಾಲಕಿಯ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಾರ್ನಿಂಗ್ ಮಾಡಿದ್ದರು. ಆದರೆ ಅಧಿಕಾರಿಗಳ ಎಚ್ಚರಿಕೆ ಹಾಗೂ ಬುದ್ದಿ ಮಾತಿಗೂ ಕೇರ್ ಮಾಡದೇ 27ರಂದು ಕದ್ದು ವಿವಾಹ ಮಾಡಲಾಗಿದೆ.










