ಗುರೂಜಿ ಹಂತಕರಿಗೆ ಫುಲ್ ಡ್ರಿಲ್ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಆರೋಪಿಗಳು!

48
firstsuddi

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ದುಮ್ಮವಾಡ ವಿದ್ಯಾನಗರ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಶೇಖರ್ ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ. 2016 ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದ್ರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ವ್ಯಾಪಾರ ಮಾಡಲು ಸಹ ನಮ್ಮನ್ನ ಬಿಡಲಿಲ್ಲ. ಅಷ್ಟೊಂದು ಕಿರುಕುಳ ನಮಗೆ ಗುರೂಜಿ ನೀಡುತ್ತಿದ್ದರು.

ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬ್ಯುಸಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು. ಒಂದಿಲ್ಲೊಂದು ಸಮಸ್ಯೆಯನ್ನು ನಮಗೆ ತಂದೊಡ್ಡುತ್ತಿದ್ದರು. ಗುರೂಜಿ ಕಾರಣಕ್ಕೆ ನಾವು ಹಲವು ಸಮಸ್ಯೆ ಎದುರಿಸಿದ್ದೇವೆ. ಬೇರೆ ಬೇರೆ ಊರುಗಳಲ್ಲಿ ಬ್ಯುಸಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.