ಚಪ್ಪಲಿ ಏಟಾದರೂ ತಿನ್ನಬಹುದು, ಆದ್ರೆ ದುಡ್ಡಿನ ಏಟು ತಿನ್ನೋಕಾಗಲ್ಲ : ಡಿಕೆಶಿ.

56
firstsuddi

ಬೆಂಗಳೂರು : ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್ ನಾಯಕರು ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಲೆ ಏರಿಕೆ ಮುಕ್ತ ಅಭಿಯಾನಕ್ಕೆ ಎಐಸಿಸಿ ಚಾಲನೆ ನೀಡಿದೆ. ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಿಲಿಂಡರ್, ಬೈಕ್ ಗಳಿಗೆ ಹೂವಿನ ಹಾರ ಹಾಕಿ ಬೈಕ್ ಗಳನ್ನು ಎತ್ತಿನಗಾಡಿಯ ಮೇಲೆ ಇಟ್ಟು ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನೂರು ಬಾರಿ ಪಟ ಪಟ ಅಂತ ಚಪ್ಪಲಿ ಏಟಾದರೂ ತಿನ್ನಬಹುದು. ದುಡ್ಡಿನ ಏಟು ತಿನ್ನೋಕಾಗಲ್ಲ. ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ. ಗ್ಯಾಸ್ ಸಿಲಿಂಡರ್, ಬೈಕ್ ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.