ಮೂಡಿಗೆರೆ : ಮಲೆನಾಡು ಭಾಗಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸುರಿದ ರಣಭೀಕರ ಮಳೆಗೆ ಚಾರ್ಮಾಡಿ ಘಾಟ್‍ನಲ್ಲಿ ಪದೇ ಪದೇ ಗುಡ್ಡ ಕುಸಿತ ಹಾಗೂ ಭೂ ಕುಸಿತ ಹಿನ್ನೆಲೆ, ಜಿಲ್ಲಾಡಳಿತ ಚಾರ್ಮಾಡಿ ಘಾಟ್‍ನಲ್ಲಿ ಘನವಾಹನಗಳ ಸಂಚಾರಕ್ಕೆ ನಿಷೇಧಿಸಿತ್ತು. ನಿಷೇಧವಿದ್ದರೂ ಸೋಮವಾರ ಪೋಲಿಸರ ಕಣ್ತಪ್ಪಿಸಿ ಚಾರ್ಮಾಡಿ ಘಾಟ್‍ನಲ್ಲಿ ಖಾಸಗಿ ಬಸ್ ಸಂಚರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆ ಕೇರಳ ಮೂಲದ ಬಸ್ಸೊಂದು ಮಂಗಳೂರು ಕಡೆಯಿಂದ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರಕ್ಕೆ ಬಂದಿದ್ದು, ಸೋಮವಾರ ಮದ್ಯಾಹ್ನ ತಮಿಳುನಾಡು ಮೂಲದ ಬಸ್ಸೊಂದು ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ಕಣ್ತಪ್ಪಿಸಿ ಚಾರ್ಮಾಡಿ ಘಾಟ್ ಮಾರ್ಗವಾಗಿ ಚಾರ್ಮಾಡಿ ಗ್ರಾಮದವರೆಗೂ ಸಂಚರಿಸಿದ್ದು ಬಣಕಲ್ ಪೋಲಿಸರು ಚಾರ್ಮಾಡಿಯಲ್ಲಿ ಬಸ್ಸನ್ನು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಹಿಂದೇಟು ಹಾಕುವ ಅಧಿಕಾರಿಗಳು ಖಾಸಗಿ ಬಸ್ ಸಂಚರಿಸುವಾಗ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಸಂಚರಿಸಿದ ಬಸ್ಸುಗಳು ಚಾರ್ಮಾಡಿ ಗ್ರಾಮದ ಗಡಿಯವರೆಗೂ ಸುರಕ್ಷಿತವಾಗಿ ತಲುಪಿದ್ದು ಸರ್ಕಾರಿ ಬಸ್ಸುಗಳು ಕೂಡ ಘಾಟ್‍ನಲ್ಲಿ ಸುಗಮವಾಗಿ ಸಂಚರಿಸಬಹುದು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಾರಂಭವಾಗಿದ್ದು ಪ್ರಯಾಣೀಕರ ಸಂಖ್ಯೆಯೂ ಕೂಡ ಹೆಚ್ಚಿದೆ. ಆದ್ದರಿಂದ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










