ಚಿಕ್ಕಮಗಳೂರು : ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಹಗಲಿರುಳೆನ್ನದೇ ಮುಂಚೂಣಿ ವಾರಿಯರ್ ಗಳಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಸುರಕ್ಷತೆಗೆ ರಾಜ್ಯಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಜಿಎಫ್ ಉಪಾಧ್ಯಕ್ಷ ಎ.ಕೆ.ವಸಂತೇಗೌಡ ಸಲಹೆ ಮಾಡಿದರು.
ತಾಲ್ಲೂಕಿನ ಆವತಿಯಲ್ಲಿ ಲಾಕ್ ಡೌನ್ ನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದಿಂದ ನೀಡಲಾದ ಪಡಿತರ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಿ ಅವರು ಮಾತನಾಡಿದರು.
ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ. ತಮ್ಮ ಜೀವವನ್ನೂ ಲೆಕ್ಕಿಸದೆ ಗ್ರಾಮೀಣ ಭಾಗಗಳಲ್ಲಿ ಹಗಲಿರುಳೆನ್ನದೇ ಆರೋಗ್ಯ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಂದಾಗಿ ಹಳ್ಳಿಯ ಮುಗ್ದ ಜನ ಜೀವ ಉಳಿಸಿಕೊಂಡು ಬದುಕಲು ಸಾಧ್ಯವಾಗಿದೆ ಎಂದರು.
ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಎನ್.ಶ್ರೀಧರ್ ಮಾತನಾಡಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಜನರ ಆರೋಗ್ಯ ರಕ್ಷಣೆಯ ಜೊತೆಗೆ ತಮ್ಮ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಬ್ಯಾರವಳ್ಳಿ, ಬಸರವಳ್ಳಿ, ಆವತಿ ಮತ್ತು ಬೈಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪಡಿತರದ ಕಿಟ್ ಗಳನ್ನು ವಿತರಿಸಲಾಯಿತು.
ಕೆಜಿಎಫ್ ಗೌರವ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಬಿ.ಮಹೇಂದ್ರ, ಮಲ್ಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಧರ್ಮೇಶ್, ನಿರ್ದೇಶಕ ಎ.ಜಿ.ಗಿರೀಶ್, ಆವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಗಿರೀಶ್ ಉಪಸ್ಥಿತರಿದ್ದರು.










