ಚಿಕ್ಕಮಗಳೂರು : ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ವೈಕುಂಠ ಏಕಾದಶಿ ಉತ್ಸವ ಸಹಸ್ರಾರು ಭಕ್ತರ ನಡುವೆ ಸೋಮವಾರ ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಕನ್ನಡ ರಾಮನಿಗೆ ಸುಪ್ರಭಾತ ಸೇವೆ, ವೇದ ಪಠಣ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು, ವೈಕುಂಠ ಏಕಾದಶಿ ಅಂಗವಾಗಿ ಶ್ರೀ ಕೋದಂಡ ರಾಮಚಂದ್ರಸ್ವಾಮಿಗೆ ರಜತ ಕವಚವನ್ನು ತೊಡಿಸಲಾಯಿತು.
ಮಹಾಮಂಗಳಾರತಿ ನಂತರ ಬೆಳಿಗ್ಗೆ 5.30 ಕ್ಕೆ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ವೇದ ಘೋಷದ ನಡುವೆ ಹೊರತಂದು ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು, ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಿದ ಬಳಿಕ ವೈಕುಂಠ ದ್ವಾರದ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ವರ್ಷಕ್ಕೊಮ್ಮೆ ಮಾತ್ರ ವೈಕುಂಠ ದ್ವಾರದ ಬಾಗಿಲುಗಳನ್ನು ತೆರೆಯುವ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಧರ್ನುಮಾಸದ ಮಾಗಿ ಚಳಿಯನ್ನೂ ಲೆಕ್ಕಿಸದೆ ನಸುಕಿನಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಭಕ್ತರು ಬಾಗಿಲುಗಳನ್ನು ತೆರೆಯುತ್ತಿದ್ದಂತೆ ಉತ್ಸವ ಮೂರ್ತಿಯೊಂದಿಗೆ ವೈಕುಂಠ ದ್ವಾರವನ್ನು ಪ್ರವೇಶಿಸಿ ಧನ್ಯತಾ ಭಾವ ಮೆರೆದರು.
ಇದೇ ವೇಳೆ ದಾಸ ಸಾಹಿತ್ಯ ಪ್ರಾಜೆಕ್ಟ್ನ ಭಜನಾ ಮಂಡಳಿಗಳು ಮತ್ತು ಭಕ್ತರಿಂದ ಭಜನೆ, ಭಗವದ್ಗೀತೆಯ ಪಠಣ, ನಾಮ ಸಂಕೀರ್ತನೆ ಜರುಗಿತು, ದೇವಾಲಯದ ವತಿಯಿಂದ ಭಕ್ತರಿಗೆ ಕೇಸರಿ ಬಾತ್, ಪೊಂಗಲ್ ಪ್ರಸಾದ, ಇ ಅಕ್ಷರಕ್ಕೆ ಈ ಉತ್ತರ ಹಾಗೂ ಪುಸ್ತಕ ತಾಂಬೂಲ ಪುಸ್ತಕಗಳನ್ನು ವಿತರಿಸಲಾಯಿತು.
ಅರ್ಚಕ ವೈಷ್ಣವ ಸಿಂಹ ಮತ್ತು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು, ಬೆಳಗಿನಿಂದ ರಾತ್ರಿಯವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವೈಕುಂಠ ದ್ವಾರವನ್ನು ಪ್ರವೇಶಿಸಿ ಸಂಭ್ರಮಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ವೈಕುಂಠ ಏಕಾದಶಿ ಉತ್ಸವ…










